ದೋಸೆ (Dosa) ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ದಕ್ಷಿಣ ಭಾರತೀಯರಿಗೆ ದೋಸೆ ತುಂಬಾ ಚಿರಪರಿಚಿತ. ಅದರಲ್ಲೂ ಕರ್ನಾಟಕ ತಮಿಳುನಾಡಿನಲ್ಲಿ ಇದು ಭಾರಿ ಫೇಮಸ್. ಇಂತಹ ದೋಸೆಯ ಸವಿಯನ್ನು ಸವಿಯದೆ ಇರದವರ ಸಂಖ್ಯೆ ಬಹಳ ಕಡಿಮೆ.
ಇನ್ನು ಈ ದೊಸೆಗಳ ದೊರೆ ಮಸಾಲೆ ದೋಸೆ ಎಲ್ಲರಿಗೂ ಅಚ್ಚುಮೆಚ್ಚು. ಇಂದು ನೂರಾರು ವೆರೈಟಿ ದೋಸೆಗಳಿದ್ದರೂ ಮಸಾಲೆ ದೋಸೆ (Masala Dosa) ನೀಡುವಷ್ಟು ರುಚಿಯ ಮಜಾ ಬೇರೆ ಯಾವುದೇ ದೋಸೆ ನೀಡುವುದಿಲ್ಲ. ಹೀಗಾಗಿ ಇಂತಹ ರುಚಿರುಚಿಯಾದ ಬಿಸಿ ಬಿಸಿ ಮಸಾಲೆ ದೋಸೆ ಮಾಡುವುದು ಹೇಗೆ ಎಂದು ಕನ್ನಡ ಅಡ್ವೈಜರ್ ನಿಮಗೆ ತಿಳಿಸಿಕೊಡಲಿದೆ.
ಬೇಕಾಗಿರುವ ಸಾಮಗ್ರಿಗಳು
- 2 ಬಟ್ಟಲು ಅಕ್ಕಿ
- 2 ಚಮಚ ಮೆಂತ್ಯ
- ಅರ್ಧ ಬಟ್ಟಲು ಉದ್ದಿನ ಬೇಳೆ
- ಕಾಲು ಬಟ್ಟಲು ಕಡಲೆ ಬೇಳೆ
- ಕಾಲು ಬಟ್ಟಲು ತೊಗರಿಬೇಳೆ
- ಕಾಲು ಬಟ್ಟಲು ಅವಲಕ್ಕಿ
- ಕಾಲು ಚಮಚ ಅರಿಶಿಣದ ಪುಡಿ
- ಅರ್ಧ ಚಮಚ ಸಕ್ಕರೆ
- ರುಚಿಗೆ ತಕ್ಕಷ್ಟು ಉಪ್ಪು
- ಎಣ್ಣೆ – ಅಗತ್ಯಕ್ಕನುಗುಣವಾಗಿ
- ನಾಲ್ಕೈದು ಈರುಳ್ಳಿ
- ಆಲೂಗಡ್ಡೆ,
- ಹಸಿ ಮೆಣಸಿನಕಾಯಿ,
- ಕೊತ್ತಂಬರಿ ಸೊಪ್ಪು, ,
- ಸಾಸಿವೆ
ಮಾಡುವ ವಿಧಾನ:
ಅಕ್ಕಿ, ಉದ್ದಿನ ಬೇಳೆ, ಕಡಲೆ ಬೇಳೆ, ತೊಗರಿ ಬೇಳೆ ಹಾಗೂ ಮೆಂತ್ಯವನ್ನು ಪಾತ್ರೆಯೊಂದಕ್ಕೆ ಹಾಕಿ ಕನಿಷ್ಠ 4 ಗಂಟೆಗಳ ಕಾಲ ನೆನೆಸಬೇಕು. ಅವಲಕ್ಕಿಯನ್ನು ಪ್ರತ್ಯೇಕವಾಗಿ 1 ಗಂಟೆಗಳ ಕಾಲ ನೆನೆಹಾಕಬೇಕು. ಇದಾದ ನಂತರ ಮಿಕ್ಸಿ ಜಾರ್ ತೆಗೆದುಕೊಂಡು ನೆನೆ ಹಾಕಿದ್ದ ಅಕ್ಕಿ, ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಅವಲಕ್ಕಿಯನ್ನು ರುಬ್ಬಿಕೊಂಡು, ಪಾತ್ರೆಯೊಂದಕ್ಕೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿಣದ ಪುಡಿ, ಚಿಟಿಕೆ ಅಡುಗೆ ಸೋಡಾ ಹಾಗೂ ಚಿಟಿಕೆ ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಒಂದು ಪಾತ್ರೆಯಲ್ಲಿ ಮುಚ್ಚಿಡಿ. ಇದನ್ನು 12 ಗಂಟೆಗಳ ಕಾಲ ನೆನೆಯಲು ಬಿಡಬೇಕು. (ಈ ಎಲ್ಲ ಕೆಲಸವನ್ನು ರಾತ್ರಿಯೇ ಮಾಡಿ ಮುಗಿಸಿದರೆದರೆ ಬೆಳಗ್ಗೆ ಹೊತ್ತಿಗೆ ಚೆನ್ನಾಗಿ ಹುದುಗು ಬಂದಿರುತ್ತದೆ. ದೋಸೆ (Dosa) ಗರಿಗರಿಯಾಗಿ ಬರುತ್ತದೆ.)
ದೋಸೆ ಮಾಡುವ ಮುನ್ನ ಆಲೂಗಡ್ಡೆಯನ್ನು ಕುಕ್ಕರಿನಲ್ಲಿ ನೀರು ಹಾಕಿ ಬೇಯಿಸಿ, ಸಿಪ್ಪೆ ಸುಲಿದಿಡಿ ಅದಕ್ಕೆ ಹೆಚ್ಚಿದ ಈರುಳ್ಳಿ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಸೇರಿಸಿ ಕಲೆಸಿ ಸಾಸಿವೆ ಒಗ್ಗರಣೆ ಹಾಕಿ. ನಂತರ ಒಲೆಯ ಮೇಲೆ ಪ್ಯಾನ್ ಇಟ್ಟು ಚೆನ್ನಾಗಿ ಕಾದ ನಂತರ ಕಾವಲಿಯ ಮೇಲೆ ದೋಸೆ ಬಿಟ್ಟು ಒಮ್ಮೆ ತಿರುವು ಹಾಕಿದ ಬಳಿಕ ಹದವಾಗಿ ಬೆಂದ ಮೇಲೆ ಅದರ ಮಧ್ಯೆ ಈರುಳ್ಳಿ ಆಲೂಗಡ್ಡೆ ಪಲ್ಯ ಇಟ್ಟು ಸುರುಳಿಯಾಗಿ ಮಡಿಚಿದರೆ ಗರ್ಮಾಗರಂ ಮಸಾಲೆ ದೋಸೆ (Masala Dosa) ರೆಡಿ. ಅಗತ್ಯ ಇದ್ದರೆ ಬೆಳ್ಳುಳ್ಳಿ, ಕೆಂಪು ಮೆಣಸಿನ ಕಾಯಿಯ ಕೆಂಪು ಚೆಟ್ನಿಯನ್ನೂ ದೋಸೆಗೆ ಸವರಬಹುದು. ಆಲೂಗಡ್ಡೆ ಪಲ್ಯ ಹಾಗೂ ಕಾಯಿ ಚಟ್ನಿಯೊಂದಿಗೆ ದೋಸೆಯನ್ನು ಸವಿಯಲು ಚೆಂದ.
A dosa is South Indian, fermented crepe made from rice batter and black lentils. Masala Dosa, specifically, is when you stuff it with a lightly cooked filling of potatoes, fried onions and spices.