ಕೋಲಾರ : ತೆಂಗಿಗೆ ತಗುಲಿರುವ ಅಮೇರಿಕನ್ ಕೀಟವೆಂದರೆ, ರುಗೋಸ್ ಸುರುಳಿಯಾಕಾರದ ಬಿಳಿ ನೊಣ. ಇದು ಅಲ್ಯುರೊಡಿಕಸ್ ರುಗಿಯೋಪರಿಕುಲೆಟಸ್ ಮಾರ್ಟಿನ್ ಎಂಬ ಜಾತಿಗೆ ಸೇರಿದ್ದಾಗಿದ್ದು ತೆಂಗಿನ ಮರಗಳಲ್ಲಿ 2004 ರಲ್ಲಿ ಮಾರ್ಟಿನ್ ರವರು ಬೆಲೀಜ್ನಲ್ಲಿ ಕಂಡು ಹಿಡಿದರು. ಕೋಲಾರ ಭಾಗದಲ್ಲಿ ಈ ಕೀಟದ ಹಾವಳಿ ಹೆಚ್ಚಾಗಿರುವುದರಿಂದ ರೈತರು ಈ ಕೆಳಗಿನ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು.
ಕೀಟದ ಲಕ್ಷಣಗಳು:-
ಇದು ರಸ ಹೀರುವ ಕೀಟವಾಗಿದ್ದು, ಗಾತ್ರದಲ್ಲಿ ಚಿಕ್ಕದ್ದಾಗಿದ್ದು, ಮೈತುಂಬ ಬಿಳಿ ಬಣ್ಣದ ಮೇದದಂತಹ ಹುಡಿ ಇರುತ್ತದೆ. ಕೀಟವು ಹಳದಿ ಮೈಬಣ್ಣದಿಂದ ಕೂಡಿದ್ದು, 4 ಬಿಳಿ ಬಣ್ಣದ ರೆಕ್ಕೆಗಳನ್ನು ಹೊಂದಿದೆ. ಸದರಿ ಕೀಟವು ಗಾಳಿಯ ಮೂಲಕ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹರಡುತ್ತದೆ. ಮರಿಹುಳುಗಳು ಹಾಗೂ ಪ್ರೌಢ ಕೀಟಗಳು ಸತತವಾಗಿ ಎಲೆಗಳ ಕೆಳಭಾಗದಲ್ಲಿ ಕುಳಿತು ರಸ ಹೀರುತ್ತವೆ. ರಸ ಹೀರುವಿಕೆಯೊಂದಿಗೆ ನೀರು ಮತ್ತು ಪೌಷ್ಠಿಕಾಂಶಗಳನ್ನು ತೆಗೆದು ಹಾಕುವುದರಿಂದ ತೆಂಗಿನ ಎಲೆಗಳ ಮೇಲೆ ಒತ್ತಡವನ್ನು ಉಂಟು ಮಾಡುತ್ತವೆ. ಇದರಿಂದ ಎಲೆಗಳ ಮೇಲ್ಭಾಗದಲ್ಲಿ ಕಪ್ಪು ಬಣ್ಣದ ಶಿಲೀಂಧ್ರ ಮಸಿ ಬಳಿದಂತೆ ಕಾಣಿಸಿಕೊಳ್ಳುತ್ತದೆ ಹಾಗೂ ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಕಡಿಮೆಯಾಗುತ್ತದೆ.
ನಿಯಂತ್ರಣ ಕ್ರಮಗಳು
ಕೀಟ ಬಾಧೆಗೆ ಒಳಪಟ್ಟ ಗಿಡಗಳ ಎಲೆಗಳನ್ನು ಕಿತ್ತು ತೆಗೆದು ಸುಡಬೇಕು. ಹಳದಿ ಬಣ್ಣದ ಬಲೆಗಳನ್ನು ಅಥವಾ ಹಳದಿ ಬಣ್ಣದ ಡ್ರಾಯಿಂಗ್ ಪೇಪರ್ಗೆ ಹರಳೆಣ್ಣೆ ಹಚ್ಚಿ ಅಲ್ಲಲ್ಲಿ ತೋಟದಲ್ಲಿ ನೇತು ಹಾಕಬೇಕು. ಹಳದಿ ಬಣ್ಣವು ಕೀಟವನ್ನು ಆಕರ್ಷಿಸುವುದರಿಂದ ಕೀಟಗಳು ಬಲೆಗಳಿಗೆ ಅಂಟಿಕೊಳ್ಳುತ್ತವೆ. ತೋಟದ ಪರಿಸರದ ವ್ಯವಸ್ಥೆಯಲ್ಲಿ ಕಪ್ಪು ಶಿಲೀಂಧ್ರವನ್ನು ಭಕ್ಷಿಸುವ ಜೀರುಂಡೆ ಲಿಯೋಕ್ರೇನಸ್ ನೀಲ್ಗಿರಿಯೆನ್ಸ್ಗಳನ್ನು ಸಂರಕ್ಷಿಸಬೇಕು. ಎಲೆಗಳ ಕೆಳಭಾಗದಲ್ಲಿ ಕೂತಿರುವ ಕೀಟಗಳಿಗೆ ನೀರು ಬಿಡಬೇಕು ಹಾಗೂ ಎಲೆಗಳ ಮೇಲೆ ಬೆಳೆದಿರುವ ಕಪ್ಪು ಶಿಲೀಂಧ್ರ ನಿಯಂತ್ರಿಸಲು ಗಂಜಿ ನೀರನ್ನು ಉಪಯೋಗಿಸಬೇಕು. ಕೀಟಗಳ ಬಾಧೆ ತೀವ್ರವಾಗಿದ್ದು, ಗಿಡಗಳ ಎತ್ತರ ಕಡಿಮೆ ಇದ್ದಲ್ಲಿ ಶೇಕಡ 0.5 ರಷ್ಟು ಬೇವಿನ ಎಣ್ಣೆ ಮತ್ತು 2.5 ಮಿ.ಲೀ. ಶ್ಯಾಂಪುವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಮರಗಳಿಗೆ ಸಿಂಪಡಿಸಬೇಕು. ರೋಗದ ತೀವ್ರತೆ ಹೆಚ್ಚಾದಲ್ಲಿ ಅಜಾಡಿರೆಕ್ಟಿನ್ 10000 ಪಿ.ಪಿ.ಎಂ 2 ಮಿ.ಲಿ. ಅಥವಾ ಅಂತರ್ವ್ಯಾಪ್ತಿ ಕೀಟನಾಶಕಗಳನ್ನು ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7829512236 ಗೆ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.