ಬೆಂಗಳೂರು: ನಿಮ್ಮ ಸಂಗಾತಿ, ಸಂಬಂಧಿಕರು, ಸ್ನೇಹಿತರು ಅಥವಾ ಇನ್ಯಾರೆ ಆದರೂ ನಿಮ್ಮ ಡೆಬಿಟ್ ಕಾರ್ಡ್ ಬಳಸಿದ್ದಲ್ಲಿ ದಂಡ ತೆರಬೇಕಾಗುತ್ತದೆ. ಏಕೆ ಗೊತ್ತಾ..? ಬ್ಯಾಂಕ್ ಹಾಗೂ ಎಟಿಎಂ ಕಾರ್ಡ್ ನಿಯಮಾವಳಿಗಳ ಪ್ರಕಾರ ಖಾತೆದಾರರನ್ನುಹೊರತು ಪಡೆಸಿ ಮತ್ಯಾರು ಡೆಬಿಟ್ ಕಾರ್ಡ್ ಬಳಕೆ ಮಾಡುವಂತಿಲ್ಲ. ಬಹುತೇಕರಿಗೆ ಈ ನಿಯಮಾವಳಿಗಳು ತಿಳಿದಿಲ್ಲ.
ಇದಕ್ಕೆ ಸಂಬಂದಿಸಿದಂತೆ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಪ್ರಕರಣ ಒಂದಕ್ಕೆ ತೀರ್ಪು ಹೋರಬಂದಿದ್ದು ನ್ಯಾಯಾಲಯ ಬ್ಯಾಂಕಿನ ನಿಯಮಾವಳಿಗಳನ್ನು ಎತ್ತಿ ಇಡಿದಿದೆ. ಬ್ಯಾಂಕಿನ ಖಾತೆದಾರರನ್ನು ಹೊರತು ಪಡಿಸಿ ಅನ್ಯ ವ್ಯಕ್ತಿಗಳು ಡೆಬಿಟ್ ಕಾರ್ಡ್ ಬಳಸುವಂತಿಲ್ಲ ಎಂದು ಬೆಂಗಳೂರು ನಗರ ಜಿಲ್ಲೆಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.
ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಇಂತಹುದೊಂದು ವಾದವನ್ನು ಮಂಡಿಸಿತ್ತು. ಇದಕ್ಕೆ ಕೋರ್ಟ್ ಕೂಡ ಸಮ್ಮತಿ ಸೂಚಿಸಿದೆ. 2013ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧವಾಗಿ ಕೋರ್ಟ್ ಸುದೀರ್ಘ ವಿಚಾರಣೆ ನಡೆಸಿ ಬ್ಯಾಂಕಿನ ಪರವಾಗಿ ತೀರ್ಪು ನೀಡಿದೆ. ಬ್ಯಾಂಕ್ ನಿಯಮಗಳು ಮತ್ತು ಎಟಿಎಂ ಪಿನ್ ನಿಯಮಗಳ ಅನ್ವಯ ಪತಿ, ಪತ್ನಿ, ಸ್ನೇಹಿತ, ಸಂಬಂಧಿ ಸೇರಿದಂತೆ ಇನ್ಯಾರೇ ಆಗಿರಲಿ ಒಬ್ಬರ ಎಟಿಎಂ ಕಾರ್ಡ್ ಅನ್ನು ಮತ್ತೊಬ್ಬರು ಬಳಕೆ ಮಾಡುವಂತಿಲ್ಲ. ಒಂದು ವೇಳೆ ಅನಧಿಕೃತವಾಗಿ ಅಥವಾ ಕಾರ್ಡ್ ಮಾಲೀಕನ ಒಪ್ಪಿಗೆ ಮೇರೆಗೆ ಕಾರ್ಡ್ ಬಳಕೆ ಮಾಡಿದಾಗ ಆಗುವ ಹಣ ನಷ್ಟಕ್ಕೆ ಖಾತೆದಾರ ಅಥವಾ ಕಾರ್ಡ್ ಬಳಕೆದಾರರೇ ಕಾರಣರಾಗುತ್ತಾರೆ ಎಂದು ನ್ಯಾಯಾಲಯ ಹೇಳಿದೆ.
ಏನಿದು ಪ್ರಕರಣ..?
2013ರಲ್ಲಿ ಮಾರತ್ತಹಳ್ಳಿ ನಿವಾಸಿ ವಂದನಾ ಅವರು ಹೆರಿಗೆ ರಜೆಯಲ್ಲಿದ್ದಾಗ ಡೆಬಿಟ್ ಕಾರ್ಡ್ ಅನ್ನು ಪತಿಗೆ ನೀಡಿದ್ದರು. ಪತಿ 25 ಸಾವಿರ ರೂ. ಡ್ರಾ ಮಾಡಲು ಎಸ್ಬಿಐ ಎಟಿಎಂಗೆ ಹೋಗಿ ಸ್ವೈಪ್ ಮಾಡಿದಾಗ ಡೆಬಿಟ್ ಆಗಿದೆ ಎಂಬ ರಶೀದಿ ಮಾತ್ರ ಬಂದಿದ್ದು, ಹಣ ಬಂದಿರಲಿಲ್ಲ. ಆಗ ವಂದನಾ ಅವರ ಪತಿ ರಾಜೇಶ್ ಬ್ಯಾಂಕ್ಗೆ ಕರೆ ಮಾಡಿ ವಿಚಾರಿಸಿದ್ದರು. ಆಗ ಬ್ಯಾಂಕ್ನವರು ಎಟಿಎಂ ಸಮಸ್ಯೆಯಿದ್ದು, 24 ಗಂಟೆಯೊಳಗೆ ಹಣ ಮರು ಪಾವತಿ ಮಾಡುವುದಾಗಿ ತಿಳಿಸಿದ್ದರು. ಆದರೆ ಹಣ ಪಾವತಿಸದ ಬ್ಯಾಂಕ್ನವರಲ್ಲಿ ಮತ್ತೆ ವಿಚಾರಿಸಿದಾಗ ವಹಿವಾಟು ಸರಿಯಾಗಿದೆ. ಹಣ ಡೆಬಿಟ್ ಆಗಿದೆ ಎಂದು ಹೇಳಿತ್ತು. ಎಟಿಎಂ ಕೇಂದ್ರದ ಸಿಸಿಟಿವಿ ಪರಿಶೀಲಿಸಿದಾಗ ಅದರಲ್ಲಿ ರಾಜೇಶ್ಗೆ ಹಣ ಯಂತ್ರದಿಂದ ಬಂದಿಲ್ಲ ಎಂಬುದು ಖಚಿತವಾಗಿ ಮತ್ತೆ ಬ್ಯಾಂಕ್ಗೆ ದೂರು ನೀಡಿದ್ದರು. ಆದರೆ ಬ್ಯಾಂಕ್ನವರು ಸಿಸಿಟಿವಿ ರೆಕಾರ್ಡ್ ಪರಿಶೀಲಿಸಿ, ಎಟಿಎಂನಲ್ಲಿ ಡೆಬಿಟ್ ಕಾರ್ಡ್ ಬಳಸಿರುವುದು ಖಾತೆದಾರರಾದ ವಂದನಾ ಅಲ್ಲ ಎಂದು ಹೇಳಿತು.
ರಾಜೇಶ್ ಡೆಬಿಟ್ ಕಾರ್ಡ್ ಸ್ವೈಪ್ ಮಾಡಿದ ದಿನ 2013ರ ನವೆಂಬರ್ 16ರಂದು ಆ ಎಟಿಎಂನಲ್ಲಿ ಹೆಚ್ಚುವರಿಯಾಗಿ 25 ಸಾವಿರ ರೂ. ಉಳಿಕೆ ಇತ್ತು ಎಂಬುದನ್ನು ತಿಳಿದುಕೊಂಡು ಗ್ರಾಹಕ ವ್ಯಾಜ್ಯಗಳ ಇತ್ಯರ್ಥ ವೇದಿಕೆಗೆ ವಂದಾನರವರು ಮೊರೆ ಹೋಗಿದ್ದರು. ಆದರೆ ಮೂರುವರೆ ವರ್ಷಗಳ ಕಾನೂನು ಹೋರಾಟದಲ್ಲಿ ಎಸ್ಬಿಐ ಪರ ವಕೀಲರು 25 ಸಾವಿರ ರೂ. ಉಳಿಕೆ ಇರಲಿಲ್ಲ ಎಂದು ವರದಿ ಸಲ್ಲಿಸಿದರು. ವಂದನಾ ಅವರ ಖಾತೆಯಿಂದ 25 ಸಾವಿರ ರೂ. ಡೆಬಿಟ್ ಆಗಿದೆ ಎಂದು ದಾಖಲೆ ಸಹಿತ ವಾದ ಮುಂದಿಟ್ಟರು.
ಸುಧೀರ್ಘ ವಿಚಾರಣೆ ನಡೆಸಿ ಕೋರ್ಟ್ ವಂದನಾರವರು ಪತಿಗೆ ಚೆಕ್ ಅಥವಾ ಇತರೆ ಯಾವುದೇ ಅಧಿಕೃತ ಪತ್ರ ನೀಡಿ ಹಣ ಡ್ರಾ ಮಾಡಿಕೊಳ್ಳುವ ಅಧಿಕಾರ ಇದೆಯೇ ಹೊರತು, ತಮ್ಮ ಡೆಬಿಟ್ ಕಾರ್ಡ್ ಮತ್ತು ಪಿನ್ ನೀಡಿ ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳುವ ಆಗಿಲ್ಲ ಎಂದು ಹೇಳಿ ಪ್ರಕರಣವನ್ನು ವಜಾಗೊಳಿಸಿದೆ. ಈ ಮೂಲಕ ಸಿಸಿಟಿವಿ ದಾಖಲೆ ಮತ್ತು ಎಟಿಎಂನಲ್ಲಿ ಹೆಚ್ಚುವರಿ 25 ಸಾವಿರ ರೂ. ಇತ್ತು ಎಂಬ ದಾಖಲೆಯನ್ನು ಸಲ್ಲಿಸಿದರೂ ವಂದನಾ ಅವರು ಡೆಬಿಟ್ ಕಾರ್ಡ್ ಅನ್ನು ಪತಿಗೆ ನೀಡಿದ್ದ ಒಂದೇ ಕಾರಣಕ್ಕೆ 25 ಸಾವಿರ ಕಳೆದುಕೊಳ್ಳಬೇಕಾಯ್ತು.
Most of us are not aware of this rule. banks, an ATM card is non-transferable and no other person apart from the account holder should use it. Bengaluru resident Vandana couple claimed that the amount was never released. Consumer Court ruled Vandana case was dismissed.