ರೈತರು ಬೆಳೆ ಬೆಳೆಯಲು ಅಗತ್ಯವಾದ ಅಂಶವೆಂದರೆ ಅದು ಗೊಬ್ಬರ. ನಮ್ಮ ದೇಹಕ್ಕೆ ಪೌಷ್ಟಿಕಾಂಶಗಳು ಎಷ್ಟು ಮುಖ್ಯವೋ, ಬೆಳೆಗಳಿಗೆ ಗೊಬ್ಬರವೂ ಅಷ್ಟೇ ಮುಖ್ಯ. ಸರಿಯಾದ ಗೊಬ್ಬರವು ಸರಿಯಾದ ಸಮಯದಲ್ಲಿ ಸಿಗದಿದ್ದರೆ ರೈತ ಬೆಳೆದ ಬೆಳೆಗಳನ್ನು ದೇವರೇ ಕಾಪಾಡಬೇಕು.
ನಮ್ಮ ದೇಶದಲ್ಲಿ ವ್ಯವಸಾಯಕ್ಕಾಗಿ ರೈತರು ಬಳಸುತ್ತಿರುವ ಗೊಬ್ಬರಗಳಲ್ಲಿ ಯೂರಿಯಾ ಪ್ರಮುಖವಾದದ್ದು. ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ 16 ಪೋಷಕಾಂಶಗಳಲ್ಲಿ ಸಾರಜನಕವು ಪ್ರಮುಖ. ಅಂತಹ ಸಾರಜನಕ ಪೋಷಕಾಂಶವನ್ನು ಶೇ.62ರಷ್ಟು ಯೂರಿಯಾ ರಸಗೊಬ್ಬರವೇ ಒದಗಿಸುತ್ತಿರುವುದು ಗಮನಾರ್ಹವಾದ ಸಂಗತಿ.
ಬೆಳೆಗಳಿಗೆ ಬೇಕಾದ ನೈಟ್ರೋಜನ್ ಅಂಶ ಯೂರಿಯಾದಲ್ಲಿ ಇರುತ್ತದೆ. ಯೂರಿಯಾವನ್ನು ಭೂಮಿಗೆ ಹಾಕಿದಾಗ, ನೈಟ್ರೋಜನ್ ಅಂಶವು ಗಾಳಿಯಲ್ಲಿ ಆವಿಯಾಗುವ ಮುನ್ನ ಕೇವಲ ಶೇ. 30ರಿಂದ 40ರಷ್ಟು ಮಾತ್ರವನ್ನು ಗಿಡಗಳು ಹೀರಿಕೊಳ್ಳುತ್ತವೆ. ಉಳಿದ ಅಂಶವು ನೀರು/ಗಾಳಿಯಲ್ಲಿ ಆವಿಯಾಗುತ್ತದೆ. ಇದರಿಂದ ಗಿಡಗಳಿಗೆ ಬೇಕಾದ ಪೂರ್ಣ ಪ್ರಮಾಣದ ನೈಟ್ರೋಜನ್ ಸಿಗುವುದಿಲ್ಲ. ಈ ರೀತಿ ಆದಾಗ ರೈತನಿಗೆ ತನ್ನ ಬೆಳೆಗಳಿಗೆ ಹೆಚ್ಚು ಹೆಚ್ಚು ಯೂರಿಯಾವನ್ನು ಹಾಕಬೇಕಾಗುತ್ತದೆ. ಆದರೆ ಇದರಿಂದ ರೈತನ ಖರ್ಚು ಹೆಚ್ಚಾಗುತ್ತಿತ್ತು. ಇದನ್ನು ಕಡಿಮೆ ಮಾಡಲು ಕೆಲವು ರೈತರು ಹಲವು ಕೆಮಿಕಲ್ಗಳ ಮೊರೆ ಹೋಗುತ್ತಿದ್ದರು. ಈ ಕೆಮಿಕಲ್ಗಳ ಬೆಲೆಯೂ ಹೆಚ್ಚು ಜತೆಗೆ ಇದರಿಂದ ಅಂತರ್ಜಲದ ಮೇಲೆ ಅತೀ ಹೆಚ್ಚು ಪರಿಣಾಮವೂ ಆಗುತ್ತಿತ್ತು. ಸಮಸ್ಯೆ ಈ ರೀತಿ ಇರುವಾಗ ಹೊಳೆದ ಉಪಾಯವೇ ‘ಬೇವು’ ಲೇಪಿತ ಯೂರಿಯಾ.
ಆದ್ದರಿಂದ ರೈತರು ಬೇವು ಲೇಪಿತ ಯೂರಿಯಾ ರಸಗೊಬ್ಬರದ ಬಳಕೆ ಮತ್ತು ಮಹತ್ವ ಅರಿಯಬೇಕು. ಹೀಗಾಗಿ ಕನ್ನಡ ಅಡ್ವೈಜರ್ ಇಂದು ಬೇವು ಲೇಪಿತ ಯೂರಿಯಾ ರಸಗೊಬ್ಬರದ ಮಹತ್ವವನ್ನು ತಿಳಿಸಿಕೊಡಲಿದೆ.
ಬೇವು ಲೇಪಿತ ಯೂರಿಯಾದ ಬಗೆಗಿನ ಕೆಲವು ಅಂಶಗಳು:
- ಸಾಮಾನ್ಯವಾಗಿ ಯೂರಿಯಾಗೂ, ಬೇವು ಲೇಪಿತ ಯೂರಿಯಾಗೂ ದರದಲ್ಲಿ ಅಂತಹ ವ್ಯತ್ಯಾಸವೇನಿಲ್ಲ.
- ಸಾರಜನಕಯುಕ್ತ ಗೊಬ್ಬರಗಳಲ್ಲಿ ಯೂರಿಯಾ ರಸಗೊಬರದಲ್ಲಿಯೇ ಹೆಚ್ಚಿನ ಸಾರಜನಕ (ಶೇ. ೪೬ರಷ್ಟು) ಇದ್ದರೂ ಸಹ ಬೆಳೆಗಳಿಗೆ ಲಭ್ಯವಾಗುವುದು ಶೇ. ೫೦ ರಷ್ಟು ಮಾತ್ರ.
- ಉಳಿದ ಸಾರಜನಕವು ನೀರಿನಲ್ಲಿ ನೈಟ್ರೇಟ್ ರೂಪವಾಗಿ ಪರಿವರ್ತಿತಗೊಂಡು ಗಾಳಿ/ನೀರಿನಲ್ಲಿ ಸೇರಿ ನಷ್ಟವಾಗುತ್ತದೆ.
- ಬೇವಿನೆಣ್ಣೆಯು ಸಾರಜನಕವು ನೈಟ್ರೇಟ್ ಆಗಿ ಪರಿವರ್ತನೆಗೊಳ್ಳುವುದನ್ನು ತಡೆಯುತ್ತದೆ.
- ಬೇವು ಲೇಪಿತ ಯೂರಿಯಾ ರಸಗೊಬ್ಬರವು ನಿಧಾನಗತಿಯಲ್ಲಿ ಸಾರಜನಕವನ್ನು ಬಿಡುಗಡೆ ಮಾಡುವುದರಿಂದ ಬೆಳೆಗಳಿಗೆ ಅವಶ್ಯವಿರುವ ಸಾರಜನಕ ನಿರಂತರವಾಗಿ ದೊರೆಯುವಂತಾಗುತ್ತದೆ.
- ಬೆಳೆಗೆ ಸಿಗಬಹುದಾದ ಸಾರಜನಕದ ಪ್ರಮಾಣ ಶೇ. ೫ ರಿಂದ ೧೦% ರಷ್ಟು ಹೆಚ್ಚುವುದರಿಂದ ಯೂರಿಯಾ ರಸಗೊಬ್ಬರ ಬಳಕೆ ಪ್ರಮಾಣ ಕಡಿಮೆಯಾಗುತ್ತದೆ.
- ಬೇವಿನೆಣ್ಣೆಯಲ್ಲಿರುವ ಕ್ರಿಮಿನಾಶಕ ಗುಣದಿಂದ ಮಣ್ಣಿನಲ್ಲಿರುವ ಜಂತು ಹುಳುಗಳು, ಗೆದ್ದಲುಗಳು ಹಾಗೂ ಇತರೆ ಮಣ್ಣಿನ ಪೀಡೆಗಳನ್ನು ನಿಯಂತ್ರಿಸಬಹುದು.
- ಬೇವಿನೆಣ್ಣೆ ಲೇಪಿಸಿರುವುದರಿಂದ ಯೂರಿಯಾ ಕಣಗಳು ಪುಡಿಯಾಗುವುದನ್ನು ತಪ್ಪಿಸಬಹುದಾಗಿದೆ.
- ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು ಬೆಳೆಗೆ ಅವಶ್ಯಕತೆಗನುಗುಣವಾಗಿ, ಮಣ್ಣು ಪರೀಕ್ಷೆ ಆಧಾರಿತ ಶಿಫಾರಸ್ಸಿನ ಮೇರೆಗೆ ಬಳಸಬೇಕು.
- ಬೇವನ್ನು ಯೂರಿಯಾದ ಮೇಲೆ ಸಿಂಪಡಿಸುವುದರಿಂದ ಆವಿಯ ಅಂಶವು ನಿಧಾನವಾಗುತ್ತದೆ. ಇದರಿಂದ ಗಿಡಗಳಿಗೆ ಬೇಕಾದ ಪೌಷ್ಠಿಕತೆಯನ್ನು ಹೀರಿಕೊಳ್ಳಲು ಸಹಾಯವಾಗುತ್ತದೆ.
- ರೈತನ ಬೆಳೆಗಳ ಇಳುವರಿ, ಗುಣಮಟ್ಟ, ಅಂತರ್ಜಲದ ನೀರಿನ ಕಲುಷಿತ ಮಟ್ಟವೂ ಕಡಿಮೆಯಾಗುತ್ತದೆ.
- ಮುಖ್ಯವಾಗಿ ಬೇವು ಲೇಪಿತ ಯೂರಿಯಾ ರಸಗೊಬ್ಬರ ಗಿಡಗಳು ಬೆಳೆಯುವ ಹಂತದಲ್ಲಿದ್ದಾಗಲೂ, ಅತೀ ಹೆಚ್ಚು ನೈಟ್ರೋಜನ್ ಪ್ರಮಾಣವನ್ನು ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ.
Neem coating urea helping plants gain more nutrient and resulting in higher yields. Neem coated urea is the urea which is coated with neem seed oil. Only 30 to 40% of N2 in the urea is utilized by the plants. Neem coating urea helps in gradual release of nitrates into soil. This may work as a bio pesticide.