ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2020-21ನೇ ಸಾಲಿನಲ್ಲಿ ಶೇ.75 ಕ್ಕಿಂತ ಹೆಚ್ಚಿನ ದೈಹಿಕ ವಿಕಲಚೇತನರಿಂದ ಯಂತ್ರಚಾಲಿತ ದ್ವಿಚಕ್ರ ವಾಹನ ಸೌಲಭ್ಯಕ್ಕಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ದೈಹಿಕ ವಿಕಲಚೇತನರಿಗೆ ಉದ್ಯೋಗ ಕೈಗೊಳ್ಳಲು ಅಥವಾ ಅವರು ಉದ್ಯೋಗ ನಿರ್ವಹಿಸುವ ಸ್ಥಳಕ್ಕೆ/ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಕಾಲೇಜುಗಳಿಗೆ ಹೋಗಿ ಬರಲು ಜೀವಿತ ಕಾಲದಲ್ಲಿ ಒಬ್ಬ ಫಲಾನುಭವಿಗೆ ಒಂದು ಬಾರಿಯಂತೆ ಯಂತ್ರಚಾಲಿತ ದ್ವಿಚಕ್ರ ವಾಹನವನ್ನು ನೀಡಲು ಅವಕಾಶವಿದ್ದು ಅರ್ಹತೆಗಳನ್ನು ಒಳಗೊಂಡಿರುವ ದೈಹಿಕ ವಿಕಲಚೇತನರು ಆನ್ಲೈನ್ ಮೂಲಕ 2 ವೀಲರ್ ಅರ್ಜಿಗಳನ್ನು http://www.dwdsc.kar.nic.in/index.asp ನಲ್ಲಿ ಜ.30 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಗಳು ಶೇ.75 ಕ್ಕಿಂತ ಹೆಚ್ಚಿನ ದೈಹಿಕ ವಿಕಲಚೇತನರಾಗಿರಬೇಕು. ಹಾಗೂ ಸೊಂಟದ ಕೆಳಗೆ ಅಂದರೆ ಎರಡು ಕಾಲುಗಳಲ್ಲಿ ಸ್ವಾಧೀನ ಕಳೆದುಕೊಂಡಿರುವ ಎರಡು ಕೈಗಳು ಸ್ವಾಧೀನದಲ್ಲಿರುವ ಹಾಗೂ ಇತರೆ ಎಲ್ಲಾ ರೀತಿಯಲ್ಲಿ ಸದೃಢರಾಗಿರುವ ವಿಕಲಚೇತನರಾಗಿರಬೇಕು. ಭಾರತದ ಪ್ರಜೆಯಾಗಿದ್ದು ಕರ್ನಾಟಕದಲ್ಲಿ ಕನಿಷ್ಠ 10 ವರ್ಷಗಳು ವಾಸವಾಗಿರಬೇಕು.ತಾಹಶೀಲ್ದಾರರು/ಸಕ್ಷಮ ಪ್ರಾಧಿಕಾರದ ಪ್ರಮಾಣ ಪತ್ರ ಲಗತ್ತಿಸುವುದು. ಕುಟುಂಬ ವಾರ್ಷಿಕ ಆದಾಯ ರೂ.2 ಲಕ್ಷಗಳಿಗಿಂತ ಕಡಿಮೆ ಇರತಕ್ಕದ್ದು. ತತ್ಸಂಬಂಧದ ಪ್ರಮಾಣ ಪತ್ರ ಲಗತ್ತಿಸುವುದು.
20 ರಿಂದ 60ರ ವಯೋಮಾನದ ತೀವ್ರತರನಾದ ದೈಹಿಕ ವಿಕಲಚೇತನರಿಗೆ ಮಾತ್ರ ಜೀವಿತ ಕಾಲದಲ್ಲಿ 1 ಬಾರಿ ಮಾತ್ರ ಈ ಸೌಲಭ್ಯ ನೀಡಲು ಅವಕಾಶವಿರುತ್ತದೆ. ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ ಲಗತ್ತಿಸುವುದು.
ಅಂಗವಿಕಲರ ಅಧಿನಿಯಮದಲ್ಲಿ ಸೂಚಿಸಿರುವ ಹಾಗೂ ವೈದ್ಯಕೀಯ ಪ್ರಾಧಿಕಾರದಿಂದ ನೀಡಿರುವ ಅಂಗವಿಕಲರ ಗುರುತಿನ ಚೀಟಿಯೊಂದಿಗೆ ದೃಢೀಕೃತ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸುವುದು. ಸರ್ಕಾರಿ ಇಲಾಖೆ/ನಿಗಮ/ಮಂಡಳಿ, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಅಥವಾ ಸಂಘ ಸಂಸ್ಥೆಗಳಿಂದ ಯಂತ್ರ ಚಾಲಿತ ದ್ವಿಚಕ್ರ ವಾಹನ ಪಡೆದಿದ್ದಲ್ಲಿ ಅರ್ಹರಾಗಿರುವುದಿಲ್ಲ.
ಯಂತ್ರಚಾಲಿತ ದ್ವಿಚಕ್ರವಾಹನವನ್ನು ಅವರ ಜೀವಿತಾವಧಿಯಲ್ಲಿ ಯಾವುದೇ ಕಾರಣಕ್ಕೆ ಪರಭಾರೆ ಮಾಡಬಾರದು, ಮಾಡಿದ್ದು ಕಂಡು ಬಂದಲ್ಲಿ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಈ ಬಗ್ಗೆ ರೂ.100/-ಗಳ ಛಾಪ ಕಾಗದದಲ್ಲಿ ಪ್ರಮಾಣ ಪತ್ರ ನೀಡತಕ್ಕದ್ದು. ಈ ಸೌಲಭ್ಯ ಪಡೆಯಲಿಚ್ಛಿಸುವ ವಿಕಲಚೇತನರು ದ್ವಿಚಕ್ರ ವಾಹನ ಚಾಲನೆ ಮಾಡುವ ಪರವಾನಗಿ ಪತ್ರ ಕಡ್ಡಾಯವಾಗಿ ಪಡೆದಿರಬೇಕು.
ನಿಗಧಿತ ಆನ್ಲೈನ್ ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, 9ನೇ ಕ್ರಾಸ್, ಶಂಕರಮಠ ರಸ್ತೆ, ಕೆ.ಆರ್.ಪುರಂ, ದೂರವಾಣಿ ಸಂಖ್ಯೆ- 08172-264546/48 ರವರನ್ನು ಸಂಪರ್ಕಿಸಬಹುದು ಎಂದು ಹಾಸನ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.