ಬೆಂಗಳೂರು, ಸೆಪ್ಟೆಂಬರ್ 08 : ಬೆಂಗಳೂರು ನಗರದ ಸಂಚಾರ ದಟ್ಟಣೆಯ ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರ ರಚಿಸಲು ತೀರ್ಮಾನಿಸಲಾಗಿದ್ದು, ಮುಂದಿನ ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಿ, ಕಾಯ್ದೆ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ಬೆಂಗಳೂರಿನಲ್ಲಿ ಕೇಂದ್ರದ ಭೂ ಸಂಪರ್ಕ ಮತ್ತು ಹೆದ್ದಾರಿಗಳ ಸಚಿರ ನಿತಿನ್ ಗಡ್ಕರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಬೆಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಬಿಬಿಎಂಪಿ, ಬಿಡಿಎ, ಬಿಎಂಆರ್ ಡಿಎ, ಲೋಕೋಪಯೋಗಿ ಇಲಾಖೆ ಗಳಿಂದ ಹಲವು ಕಾಮಗಾರಿಗಳು ನಡೆಯುತ್ತಿರುತ್ತವೆ. ಈ ಬಗ್ಗೆ ಸಮಗ್ರ ಮಾಸ್ಟರ್ ಪ್ಲಾನ್ ರೂಪಿಸಿದರೆ ಬಹಳಷ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ಎಲ್ಲ ಸಂಸ್ಥೆಗಳ ಜೊತೆಗೆ ರೈಲ್ವೆ , ಮಟ್ರೋ ವನ್ನು ಒಳಗೊಂಡಂತೆ ಬೆಂಗಳೂರು ಮತ್ತು ಬೆಂಗಳೂರು ಸುತ್ತಮುತ್ತಲಿನ ಸಂಚಾರ ದಟ್ಟಣೆಯ ನಿರ್ವಹಣೆಗೆ ಪ್ರಾಧಿಕಾರವನ್ನು ರಚನೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ಇಡೀ ರಾಷ್ಟ್ರದ ರಸ್ತೆ ಸಾರಿಗೆ ವ್ಯವಸ್ಥೆ ಬಗ್ಗೆ ‘ಮಂಥನ’ ಸಮಾವೇಶವನ್ನು 3 ದಿನಗಳ ಕಾಲ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ರಸ್ತೆ ಹಾಗೂ ಸಂಚಾರದಟ್ಟಣೆಯ ಬಗ್ಗೆ ಕೇಂದ್ರ ಸಚಿವರೊಂದಿಗೆ ಸಭೆ ನಡೆಸಲಾಗಿದ್ದು, ಕೇಂದ್ರದ ಸಹಯೋಗ ಮತ್ತು ಸಹಕಾರವನ್ನು ಕೋರಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಬೆಂಗಳೂರಿನ ಒಳಗೆ ಮತ್ತು ಹೊರಗೆ ಹಾದುಹೋಗುತ್ತವೆ. ಸಂಚಾರ ದಟ್ಟಣೆಯ ನಿವಾರಣೆಗೆ ರಸ್ತೆ ನಿರ್ಮಾಣಗಳು ಬಲು ಮುಖ್ಯವಾಗಿದೆ. ಹಲವು ವಿಚಾರಗಳನ್ನು ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.
ಮೂರು ಮಟ್ಟದ ಸಾರಿಗೆ ತಂತ್ರಜ್ಞಾನದ ಯೋಜನೆಗೆ ತೀರ್ಮಾನ :
ಮೆಟ್ರೋ, ಫ್ಲೈ ಓವರ್ ಹಾಗೂ ರಸ್ತೆಗೆ ಬಳಕೆಯಾಗುವಂತಹ ಬಹುಪಯೋಗಿ ಪಿಲ್ಲರ್ ನಿರ್ಮಿಸುವ ತಂತ್ರಜ್ಞಾನವನ್ನು ಬಳಸಿ ಬೈಯಪ್ಪನಹಳ್ಳಿಯಲ್ಲಿ ರೈಲು ನಿರ್ಮಾಣ ಯೋಜನೆ ರೂಪಿಸಲಾಗಿದೆ. ಒಂದೇ ಪಿಲ್ಲರ್ ನ್ನು ಬಳಸಿ ಮೂರು ಅಂತಸ್ತುಗಳಲ್ಲಿ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸುವ ಈ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡರೆ ಭೂ ಸ್ವಾಧೀನದ ಪ್ರಮಾಣ ಕಡಿಮೆಯಾಗುವುದು. ಈ ಬಗ್ಗೆ ಅಂತರರಾಷ್ಟ್ರೀಯ ತಜ್ಞರೊಂದಿಗೆ ಚರ್ಚಿಸಿ ಯೋಜನೆ ರೂಪಿಸಲು ತೀರ್ಮಾನಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಗಳು ಸಾಗುವಲ್ಲಿ ಇರುವ ಅಂತರ ಹಾಗೂ ರಾಷ್ಟ್ರೀಯ ಹೆದ್ದಾರಿಯಿಂದ ಹೆದ್ದಾರಿಗಳ ಸಂಪರ್ಕಕ್ಕೆ ಇರುವ ಖಾಲಿ ಸ್ಥಳವನ್ನು ತುಂಬಿಕೊಡುವುದಾಗಿ ತಿಳಿಸಿದರು. ಎಸ್.ಟಿ.ಆರ್ ಆರ್ ನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ವರ್ತುಲ ರಸ್ತೆಯ ಮಧ್ಯದಲ್ಲಿ ಸಣ್ಣ ರಿಂಗ್ ರಸ್ತೆಯನ್ನು ಮಾಡುವ ಚಿಂತನೆಯನ್ನು ಮಾಡಿದ್ದೇವೆ. ವಿನೂತವಾಗಿ ಹೊಸ ತಂತ್ರಜ್ಞಾನವನ್ನು ಉಪಯೋಗ ಮಾಡಿಕೊಂಡು ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಅತ್ಯಂತ ಮಹತ್ವದ ತೀರ್ಮಾನಗಳನ್ನು ಮಾಡಲಾಗಿದೆ. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು, ಪೂನಾ ಬೆಂಗಳೂರು- ಹೆದ್ದಾರಿಯ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಕೂಡಲೇ ಸರಿಪಡಿಸಲು ಸಭೆಯಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಸಚಿವಾಲಯ ಕಾರ್ಯದರ್ಶಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ಒಳಚರಂಡಿ ವ್ಯವಸ್ಥೆಗೆ ಹೊಸ ಯೋಜನೆ
ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ಕಾಮಗಾರಿ ಇನ್ನಷ್ಟು ವೇಗವಾಗಿ ಪೂರ್ಣಗೊಳ್ಳಬೇಕು. ಅಲ್ಲಿನ ಮಳೆನೀರು ಚರಂಡಿ ವ್ಯವಸ್ಥೆಗಳ ತೊಡಕುಗಳ ಬಗ್ಗೆ ಹೊಸದಾಗಿ ಗೊತ್ತಾಗಿದೆ. ಎಲ್ಲೆಲ್ಲಿ ನೀರು ನಿಂತಿದೆ ಹಾಗೂ ಎಲ್ಲೆಲ್ಲಿ ನೀರು ನಿಲ್ಲಬಹುದೆಂದು ತಿಳಿದುಕೊಂಡು ಒಳಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಹೊಸ ಯೋಜನೆ ತಯಾರಿಸಲು ಸಚಿವರು ಸೂಚಿಸಿದ್ದು, ಅದನ್ನು ಅನುಷ್ಠಾನ ಮಾಡುವುದಾಗಿ ತಿಳಿಸಿದ್ದಾರೆ. ಇದು ತಾಂತ್ರಿಕ ಯೋಜನೆಯಾಗಿದ್ದು, ಮುಂದಿನ ದಿನಗಳಲ್ಲಿ ಮಾಡುವುದಾಗಿ ತಿಳಿಸಿದ್ದಾರೆ ಎಂದರು.
ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಪ್ರೋತ್ಸಾಹದಾಯಕ ಚರ್ಚೆ
ಎಸ್.ಟಿ.ಆರ್ಆರ್ ಪೂನಾ – ಬೆಂಗಳೂರು ಹೆದ್ದಾರಿಯಿಂದ ಚನ್ನೈ ರಾಷ್ಟ್ರೀಯ ಹೆದ್ದಾರಿ ಬಳಿ ತಮಿಳು ನಾಡು ಮೂಲಕ ಹಾದುಹೋಗಿ ವಾಪಸ್ಸು ಬರುತ್ತದೆ. ಈ ಮಧ್ಯೆ 40-50ಕಿಮೀ ನೇರವಾಗಿ ಸಂಪರ್ಕ ಮಾಡಲು ಸಾಧ್ಯವಿದೆ. ಹೊಸದಾಗಿ ಈ ಅಂಶವನ್ನೂ ಅಳವಡಿಸಿಕೊಳ್ಳಬೇಕೆಂಬ ವಿಚಾರವನ್ನು ತಿಳಿಸಲಾಗಿದೆ. ಅದನ್ನು ಪರಿಶೀಲಿಸುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ.
ಕೇಂದ್ರ ರಸ್ತೆ ನಿಧಿಯಡಿ ನಿಯಮಿತ ಕಾಮಗಾರಿಗಳು, ಅದಕ್ಕೆ ಅಗತ್ಯವಿರುವ ಅನುದಾನ, ಹೆಚ್ಚಿನ ಹೆದ್ದಾರಿಗಳನ್ನು ಘೋಷಿಸುವುದರ ಬಗ್ಗೆ ಈಗಾಗಲೇ ಪತ್ರವನ್ನು ಕಳುಹಿಸಲಾಗಿತ್ತು. ಸಚಿವರು ಈ ಬಗ್ಗೆ ಸಕಾರಾತ್ಮಕವಾಗಿದ್ದಾರೆ. ನಾಳೆ ಬೆಳಿಗ್ಗೆ ಮತ್ತೊಮ್ಮೆ ಈ ಬಗ್ಗೆ ಸಭೆ ನಡೆಸಿ ಕೂಡಲೇ ಏನು ಮಾಡಲು ಸಾಧ್ಯ, ಎಲ್ಲಾ ಏಜೆನ್ಸಿಗಳು, ಸರ್ಕಾರದ ಪ್ರಾಧಿಕಾರಗಳು ಹೇಗೆ ಕೆಲಸ ಮಾಡಲು ಸಾಧ್ಯ. ಕೇಂದ್ರ ಸರ್ಕಾರದಿಂದ ಏನು ಮಾಡಲು ಸಾಧ್ಯ ಎನ್ನುವ ಬಗ್ಗೆ ನಾಳೆ ಬೆಳಿಗ್ಗೆ ಸ್ಥೂಲವಾಗಿ ಚರ್ಚಿಸಲಾಗುವುದು ಎಂದು ನಿತಿನ್ ಗಡ್ಕರಿ ಅವರು ಭರವಸೆ ನೀಡಿದ್ದಾರೆ. ಚರ್ಚೆ ಬಹಳಷ್ಟು ಪ್ರೋತ್ಸಾಹದಾಯಕವಾಗಿದೆ. ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ರೂಪದಲ್ಲಿ ಚರ್ಚೆ ಮಾಡಲಾಗಿದೆ ಎಂದರು.
ಹುಬ್ಬಳ್ಳಿ-ಧಾರವಾಡ ಬೈಪಾಸ್
ಕಳೆದ ಬಾರಿ ಹುಬ್ಬಳ್ಳಿ ಧಾರವಾಡದ ಬೈಪಾಸ್ ಖಾಸಗಿಯವರಿಗೆ ಹಸ್ತಾಂತರವಾಗಿ ಟೆಂಡರ್ ಆಗಿದೆ. ಬಹುತೇಕವಾಗಿ 2-3 ತಿಂಗಳಲ್ಲಿ ಪ್ರಾರಂಭವಾಗುತ್ತದೆ. ಬೆಂಗಳೂರು- ಮೈಸೂರು ಹೆದ್ದಾರಿಯನ್ನು ಈಗಿರುವ ಯೋಜನೆಯಂತೆ ನಿರ್ಮಿಸಲಾಗುವುದು. ಗ್ರಾಮಸ್ಥರ ಕೋರಿಕೆಯ ಮೇಲೆ ಪ್ರವೇಶ ಮತ್ತು ನಿರ್ಗಮನ ಪಾಯಿಂಟ್ಗಳನ್ನು ಪ್ರಾಧಿಕಾರದವರು ಮಾಡಿಕೊಡಲಿದ್ದಾರೆ ಎಂದರು.
ಮುಖ್ಯವಾಗಿ ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳು, ಶಿರಾಡಿ ಘಾಟ್ ನಿಂದ ಹಿಡಿದು ಪ್ರಮುಖ ಹೆದ್ದಾರಿಗಳ ಬಗ್ಗೆ ಚರ್ಚೆ ಆಗಿದೆ. ಬೆಂಗಳೂರಿನ ಬಗ್ಗೆ ಪ್ರತ್ಯೇಕವಾಗಿ ಚರ್ಚೆಯಾಗಲಿದೆ. ಇಂದು ಮುಖ್ಯವಾಗಿ ಬೆಂಗಳೂರಿನ ಸಂಚಾರ ದಟ್ಟಣೆಯ ಸುಧಾರಣೆಯ ಬಗ್ಗೆ ಚರ್ಚೆಯಾಗಿದೆ ಎಂದರು.