ಹುಣಸೂರು: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಸಂಸ್ಥೆಯನ್ನು (ಜಿಟಿಟಿಸಿ) ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಗುರುವಾರ ಇಲ್ಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಜಿಟಿಟಿಸಿ ಕೇಂದ್ರದಲ್ಲಿ ಪ್ರತೀ ವರ್ಷವೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಆಧುನಿಕ ಕೌಶಲ್ಯಗಳಿರುವ ತರಬೇತಿ ನೀಡಿ, ಅವರನ್ನು ಉದ್ಯೋಗಗಳಿಗೆ ಅರ್ಹರನ್ನಾಗಿ ಮಾಡಲಾಗುವುದು. ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಲಿತವರು ಕೂಡ ತರಬೇತಿ ಪಡೆದುಕೊಳ್ಳಬಹುದು. ಇದ್ಯಾವುದಕ್ಕೂ ವಿದ್ಯಾರ್ಥಿಗಳ ಬಳಿ ಸರ್ಕಾರವು ನಯಾಪೈಸೆ ಶುಲ್ಕವನ್ನೂ ತೆಗೆದುಕೊಳ್ಳದೆ, ಸಂಪೂರ್ಣ ಉಚಿತವಾಗಿ ತರಬೇತಿ ನೀಡಲಿದೆ ಎಂದರು.
ಈ ಕೇಂದ್ರದಲ್ಲಿ ಡೈಯಿಂಗ್, ಫಿಟ್ಟರ್, ಮೆಟಲರ್ಜಿ ಸೇರಿದಂತೆ 10ಕ್ಕೂ ಹೆಚ್ಚು ಆಧುನಿಕ ಕೋರ್ಸುಗಳಿವೆ, ಇವುಗಳಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ತರಬೇತಿಗಳೆರಡೂ ಇವೆ. ಮುಂಬರುವ ದಿನಗಳಲ್ಲಿ ಈ ಜಿಟಿಟಿಸಿಯಲ್ಲಿ ಮತ್ತಷ್ಟು ಕೋರ್ಸುಗಳನ್ನು ಆರಂಭಿಸಲಾಗುವುದು. ಕರ್ನಾಟಕದ ಈ ಮಾದರಿಯನ್ನು ತಮಿಳುನಾಡು, ಅಸ್ಸಾಂ ಮುಂತಾದ ರಾಜ್ಯಗಳೂ ಅನುಕರಿಸುತ್ತಿವೆ ಎಂದು ಅವರು ವಿವರಿಸಿದರು.
ರಾಜ್ಯ ಸರಕಾರವು ಯುವಜನರಲ್ಲಿ ಕೌಶಲ್ಯ ತರಬೇತಿಗೆ ಆದ್ಯತೆ ಕೊಟ್ಟಿದೆ. ಹಿಂದೆಲ್ಲ ವರ್ಷಕ್ಕೆ ಕೇವಲ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ಕೌಶಲ್ಯ ತರಬೇತಿ ಕೊಡಲಾಗುತ್ತಿತ್ತು. ಈಗ ಈ ಸಂಖ್ಯೆ ಹಲವು ಲಕ್ಷಗಳಿಗೆ ಏರಿದೆ. ಇದಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಿದ್ದು, ಯುವಜನರಲ್ಲಿರುವ ಕೊರತೆಗಳನ್ನು ಗಮನಿಸಿ, ಅದಕ್ಕೆ ತಕ್ಕಂತೆ ಸರಕಾರವೇ ಉಚಿತ ತರಬೇತಿಗೆ ವ್ಯವಸ್ಥೆ ಮಾಡುತ್ತಿದೆ ಎಂದು ಅವರು ನುಡಿದರು.
4,500 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ 150 ಐಟಿಐಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಉಳಿದಿರುವ 30 ಐಟಿಐಗಳನ್ನು ಈ ವರ್ಷ ಉನ್ನತೀಕರಿಸಲಾಗುವುದು. ಇದಕ್ಕಾಗಿ ಯೋಜನೆಯನ್ನು ಸಿದ್ಶಪಡಿಸಲಾಗುತ್ತಿದೆ. ಹಾಗೆಯೇ ಪಾಲಿಟೆಕ್ನಿಕ್ಗಳಲ್ಲಿ ಶೇಕಡ 100ರಷ್ಟು ದಾಖಲಾತಿ ಆಗುವಂತೆ ವಿದ್ಯಾರ್ಥಿಗಳನ್ನು ಆಕರ್ಷಿಸಲಾಗುತ್ತಿದೆ. ಜಿಟಿಟಿಸಿಗಳಿಗಂತೂ ಈಚಿನ ವರ್ಷಗಳಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಇಡೀ ದೇಶದಲ್ಲೇ ಅತ್ಯಂತ ಕಡಿಮೆ ಪ್ರಮಾಣದ ನಿರುದ್ಯೋಗ ಹೊಂದಿರುವ ರಾಜ್ಯವೆಂದರೆ ಕರ್ನಾಟಕ ಮಾತ್ರ. ಆಯಾ ಕಾಲಕ್ಕೆ ತಕ್ಕ ನೀತಿಗಳನ್ನು ರೂಪಿಸಿಕೊಂಡು, ಹೊಸತನಕ್ಕೆ ತೆರೆದುಕೊಳ್ಳುತ್ತಿರುವುದರಿಂದ ಇದು ಸಾಧ್ಯವಾಗಿದೆ. ಇದರ ಜತೆಗೆ ತಂತ್ರಜ್ಞಾನದ ಅನ್ವಯಿಕತೆಯು ರಾಜ್ಯದ ಶಕ್ತಿಯಾಗಿದೆ. ಹೀಗಾಗಿ ಇಡೀ ದೇಶದ ಎಲ್ಲಾ ಭಾಗಗಳಿಂದಲೂ ನಮ್ಮಲ್ಲಿಗೆ ಉದ್ಯೋಗ ಅರಸಿಕೊಂಡು ಬರುವವರ ಸಂಖ್ಯೆ ಜಾಸ್ತಿ ಇದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಮಾತನಾಡಿದರು. ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪೊಲೀಸರಿಂದ ಗೊಂದಲ, ಸಚಿವರ ವಿಷಾದ(ಬಾಕ್ಸ್)
ಜಿಟಿಟಿಸಿ ಉದ್ಘಾಟನೆಗೆ ಭಾರೀ ಮುತುವರ್ಜಿ ವಹಿಸಿ, ಕಾರ್ಯಕ್ರಮ ಏರ್ಪಡಿಸಿದ್ದ ಸ್ಥಳೀಯ ಶಾಸಕ ಮಂಜುನಾಥ್ ಅವರು ಪೊಲೀಸರು ಮಾಡಿದ ಒಂದು ಅಚಾತುರ್ಯದಿಂದ ಸಮಾರಂಭಕ್ಕೆ ಬಾರದೆ ಉಳಿದರು. ಸಚಿವರನ್ನು ಜಿಟಿಟಿಸಿಗೆ ಕರೆದುಕೊಂಡು ಬರಬೇಕಿದ್ದ ಸ್ಥಳೀಯ ಪೊಲೀಸರು, ಸಂವಹನದ ಗೊಂದಲವುಂಟಾಗಿ ಮಹಿಳಾ ಪ್ರಥಮ ದರ್ಜೆಗೆ ಕರೆದುಕೊಂಡು ಹೋಗಿಬಿಟ್ಟರು. ಏಕೆಂದರೆ, ಅಲ್ಲೂ ಸಚಿವರು ನೂತನ ಕಟ್ಟಡದ ಬ್ಲಾಕ್ ಉದ್ಘಾಟಿಸುವ ಕಾರ್ಯಕ್ರಮವಿತ್ತು. ಆದರೆ, ಎರಡೂ ಕಾರ್ಯಕ್ರಮಗಳ ಸಮಯ ಬೇರೆಬೇರೆ ಇತ್ತು. ಮೊದಲಿಗೆ ಇದ್ದ ಜಿಟಿಟಿಸಿ ಕಾರ್ಯಕ್ರಮವನ್ನು ಮರೆತು, ಸಚಿವರನ್ನು ಡಿಗ್ರಿ ಕಾಲೇಜಿಗೆ ಕರೆದುಕೊಂಡು ಹೋಗಿದ್ದರಿಂದ ಶಾಸಕರು ಬೇಸರಗೊಂಡು, ಸ್ಥಳದಿಂದ ನಿರ್ಗಮಿಸಿದರು, ಜಿಟಿಟಿಸಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಅಶ್ವತ್ಥನಾರಾಯಣ, “ಈ ಕಾರ್ಯಕ್ರಮಕ್ಕೆ ನಾನು ಬಂದಿದ್ದೇ ಶಾಸಕ ಮಂಜುನಾಥ್ ಅವರ ಪ್ರೀತಿ-ಒತ್ತಾಸೆಗಳಿಂದ, ಆದರೆ, ಸಣ್ಣ ಗೊಂದಲದಿಂದ ಕಾರ್ಯಕ್ರಮದಲ್ಲಿ ಏರುಪೇರಾಗಿ, ನಾನು ಒಂದು ಗಂಟೆ ಕಾಲ ತಡವಾಗಿ ಬಂದೆ. ಇವೆಲ್ಲ ಸಣ್ಣಪುಟ್ಟ ವ್ಯತ್ಯಾಸಗಳು. ಶಾಸಕರಿಗೆ ಅನನುಕೂಲ ಆಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ,” ಎಂದರು.
ಸಂಸದ ಪ್ರತಾಪಸಿಂಹ ಕೂಡ ಈ ಲೋಪಕ್ಕೆ ಬೇಸರ ವ್ಯಕ್ತಪಡಿಸಿ, ಸಂವಹನದ ಗೊಂದಲದಿಂದ ಹೀಗಾಗಿದೆ. ಶಾಸಕರ ಅನ್ಯತಾ ಭಾವಿಸಬಾರದು” ಎಂದರು.