ಗಜಕೇಸರಿ ಯೋಗ ಎಂದರೇನು? (Gajakesari Yoga)
ಗಜಕೇಸರಿ ಯೋಗವನ್ನು ಗುರು-ಚಂದ್ರ ಯೋಗ ಅಂತಲೂ ಕರೆಯಲಾಗುತ್ತದೆ. ಜನ್ಮ ಜಾತಕದಲ್ಲಿ ಗುರು ಹಾಗೂ ಚಂದ್ರ ಒಟ್ಟಿಗೇ ಇದ್ದರೆ ಅದನ್ನು ಗಜಕೇಸರಿ ಯೋಗ ಎನ್ನಲಾಗುತ್ತದೆ. ಅದೇ ರೀತಿ ಗುರು ಗ್ರಹ ಎಲ್ಲಿದೆಯೋ ಅಲ್ಲಿಂದ ನಾಲ್ಕು-ಏಳು ಅಥವಾ ಹತ್ತಿರದಲ್ಲಿ ಚಂದ್ರ ಸ್ಥಿತನಾಗಿದ್ದರೆ ಆಗಲೂ ಈ ಯೋಗ ಬರುತ್ತದೆ.
ಗಜಕೇಸರಿ ಯೋಗ ಹೊಂದಿದವರು ಎಷ್ಟೆಲ್ಲ ಪ್ರಯೋಜನಗಳನ್ನು ಹೊಂದಿರುತ್ತಾರೆ ?
– ಈ ಯೋಗವು ಗುರು ದಶೆ ಚಂದ್ರ ಭುಕ್ತಿಯಲ್ಲಿ ಅಥವಾ ಚಂದ್ರ ದಶೆ ಗುರು ಭುಕ್ತಿಯಲ್ಲಿ ತನ್ನ ಫಲ ನೀಡಲು ಆರಂಭಿಸುತ್ತದೆ. ನಿಮ್ಮ ಜಾತಕದಲ್ಲಿ ಇರುವ ಮಾಹಿತಿ ಎಂಬುದರ ಆಧಾರದಲ್ಲಿ ಈ ಎರಡು ದಶೆ ಅಥವಾ ಭುಕ್ತಿ ಯಾವಾಗ ನಡೆಯುತ್ತದೆ ಎಂಬುದು ತಿಳಿದುಕೊಳ್ಳಬಹುದು. ಯಾರಿಗೆ ಈ ಗಜಕೇಸರಿ ಯೋಗ ಇದೆ ಎಂಬುದು ತಿಳಿದುಬರುತ್ತದೋ ಅಂಥವರ ಜತೆಗೆ ಸೇರಿ ವ್ಯಾಪಾರ-ವ್ಯವಹಾರ ಮಾಡುವುದರಿಂದಲೂ ಉತ್ತಮ ಫಲ ದೊರೆಯುತ್ತದೆ. ಇನ್ನು ಯಾರಿಗೆ ಈ ಯೋಗ ಇರುತ್ತದೋ ಅಂಥವರು ಅದೇ ಸಮಯದಲ್ಲಿ ಹೊಸ ವ್ಯವಹಾರ-ವ್ಯಾಪಾರ ಆರಂಭಿಸುವುದರಿಂದ, ಹೊಸ ಕೆಲಸಗಳನ್ನು ಕೈಗೆತ್ತಿಕೊಳ್ಳುವುದರಿಂದ, ಉನ್ನತ ವಿದ್ಯಾಭ್ಯಾಸ, ಶಾಸ್ತ್ರಾಧ್ಯಯನ ಮಾಡುವುದರಿಂದಲೂ ಯಶಸ್ಸು ಕಾಣಬಹುದು.
– ಕರ್ಕ ರಾಶಿಯಲ್ಲಿ ಗುರು, ಮಂಗಳ, ಚಂದ್ರನ ವಾಸವಿದ್ದು, ಗಜಕೇಸರಿ ಯೋಗವಿದ್ದರೆ ವ್ಯಕ್ತಿ ಸಾಮಾನ್ಯವಾಗಿ ದೈವ ಆಶೀರ್ವಾದದಿಂದ ಸಾಕಷ್ಟು ಶ್ರೀಮಂತರಾಗಿ ಬೆಳೆಯುತ್ತಾರೆ. ಅವರ ಶ್ರೀಮಂತಿಕೆ ಹಾಗೂ ಸಮೃದ್ಧಿಗೆ ಯಾವುದೇ ಪಾರವಿರುವುದಿಲ್ಲ.
– ಗಜಕೇಸರಿ ಯೋಗ ಮತ್ತು ವಿವಾಹ :- ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನ್ಮ ಕುಂಡಲಿಯ 7ನೇ ಮನೆಯು ವಿವಾಹದ ಭವಿಷ್ಯವನ್ನು ಹೇಳುತ್ತದೆ. ಯಾರು ಗಜಕೇಸರಿ ಯೋಗವನ್ನು ಏಳನೇ ಮನೆಯಲ್ಲಿ ಹೊಂದಿರುತ್ತಾರೆ? ಅವರ ವೈವಾಹಿಕ ಜೀವನದ ಮೇಲೆ ಯೋಗದ ಪ್ರಭಾವ ಆಳವಾಗಿ ಇರುತ್ತದೆ. ಏಳನೇ ಮನೆಯಲ್ಲಿ ಗಜಕೇಸರಿ ಯೋಗ ಹೊಂದಿರುವ ವ್ಯಕ್ತಿಯು ಅತ್ಯುತ್ತಮ ಸಂಗಾತಿಯನ್ನು ಪಡೆದುಕೊಳ್ಳುವರು. ಜೊತೆಗೆ ವೈವಾಹಿಕ ಜೀವನ, ಸಂಬಂಧ ಹಾಗೂ ಕುಟುಂಬಗಳಲ್ಲಿ ಉತ್ತಮ ಸಂಬಂಧವನ್ನು ಪಡೆದುಕೊಳ್ಳುವರು. ಜೊತೆಗೆ ಸುಂದರ ಅನುಭವಗಳನ್ನು ಪಡೆದುಕೊಳ್ಳುವರು. ಈ ಯೋಗ ಹೊಂದಿದವರು ಬಹುಬೇಗ ವಿವಾಹದ ಯೋಗವನ್ನು ಪಡೆದುಕೊಂಡಿರುತ್ತಾರೆ. ಇವರು ಸಮಾಜದಲ್ಲಿ ಉತ್ತಮ ಮತ್ತು ಯಶಸ್ವಿಯಾದ ದಾಂಪತ್ಯ ಜೀವನವನ್ನು ಅನುಭವಿಸುವರು.
– ಇವರು ದೈಹಿಕವಾಗಿ ಸದೃಢರಾಗಿರುತ್ತಾರೆ. ಅದೃಷ್ಟ ಜಾಸ್ತಿ ಇರುತ್ತದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಜಯ ಪ್ರಾಪ್ತಿ ಆಗುತ್ತದೆ. ಈ ಜಾತಕರು ಸೃಜನಶೀಲರಾಗಿರುತ್ತಾರೆ. ಸಂಪೂರ್ಣ ವಿದ್ಯಾವಂತರಾಗುತ್ತಾರೆ. ಉತ್ತಮವಾದ ವ್ಯಾಪಾರ-ವ್ಯವಹಾರ, ಉದ್ಯೋಗವನ್ನು ಮಾಡುವಂಥವರಾಗುತ್ತಾರೆ. ಇವರು ತಮ್ಮದೇ ವ್ಯಾಪ್ತಿಯಲ್ಲಿ ಸಾಧನೆ ಮಾಡುವ ಅವಕಾಶ ಅಪಾರವಾಗಿರುತ್ತದೆ. ತಮ್ಮ ಮನೆ, ಜಿಲ್ಲೆ, ರಾಜ್ಯ, ಅಷ್ಟೇ ಏಕೆ ದೇಶಕ್ಕೇ ಹೆಸರು ತರಬಲ್ಲ ಶಕ್ತಿ ಇವರಿಗಿರುತ್ತದೆ.
ನಮ್ಮ ರಾಶಿಗಳ ಅನುಸಾರ ಗಜಕೇಸರಿ ಯೋಗ ಹೇಗೆ ಕೆಲಸಮಾಡುತ್ತದೆ ?
– ಮೇಷ: ಧಾರ್ಮಿಕ ಕ್ಷೇತ್ರಗಳಲ್ಲಿ ಕೀರ್ತಿವಂತರು, ವೈದ್ಯರಲ್ಲಿ ಶ್ರೇಷ್ಟರು, ರಾಜಕೀಯದಲ್ಲಿ ಪರಿಣತರು ಆಗುವರು.
– ವೃಷಭ: ಕುಟುಂಬದ ಜವಾಬ್ದಾರಿ ಪಡೆಯುತ್ತಾರೆ. ಒಡಹುಟ್ಟಿದವರಿಗೆ ವಿವಾಹ ಕಾರ್ಯಗಳನ್ನು ಮಾಡಿಸುತ್ತಾರೆ. ಉದ್ಯಮಿಗಳಾದರೆ ನೂರಾರು ಜನರಿಗೆ ಕೆಲಸ ಕೊಡುವಂತವರಾಗುತ್ತಾರೆ.
– ಮಿಥುನ: ಹೊಟೇಲ್ ಉದ್ಯಮದಲ್ಲಿ, ರಸ ಪದಾರ್ಥ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಕೀರ್ತಿ ಪಡೆಯುತ್ತಾರೆ.
– ಕಟಕ: ಧಾರ್ಮಿಕ ಕ್ಷೇತ್ರಗಳಲ್ಲಿ ಆಸಕ್ತರು, ಸಾಹಿತಿಗಳು, ಜ್ಯೋತಿಷ್ಯದ ಮಹಾಪಂಡಿತರು, ಉದ್ಯೋಗದಲ್ಲಿ ಬೇಗನೆ ಬಡ್ತಿಗಳನ್ನು ಪಡೆದು ಅಧಿಕಾರಿಗಳಾಗುತ್ತಾರೆ.
– ಸಿಂಹ: ಸಹಕಾರಿ ರಂಗದಲ್ಲಿ ಉತ್ತಮರು, ಅಧಿಕಾರಿಗಳು, ವಿದ್ಯಾವಂತರು, ರಾಜಕೀಯ ಕ್ಷೇತ್ರದಲ್ಲಿ ನೀತಿವಂತರಾಗುತ್ತಾರೆ.
– ಕನ್ಯಾ: ಈ ರಾಶಿಯ ಸ್ತ್ರೀಯರಲ್ಲಿ ಗಜಕೇಸರಿ ಯೋಗವಿದ್ದರೆ ಹೆಚ್ಚು ವಿದ್ಯಾವಂತರಾಗಿರುತ್ತಾರೆ. ಸರ್ಕಾರಿ ಅಥವಾ ಸಾರ್ವಜನಿಕ ಕ್ಷೇತ್ರಗಳಲ್ಲಿ ಅಧಿಕಾರಿಗಳಾಗಿರುತ್ತಾರೆ. ಉತ್ತಮ ಪುತ್ರ ಸಂತಾನವಿದ್ದು ಸ್ವಂತ ಉದ್ಯಮ ಸ್ಥಾಪಿಸುವವರು ಉದ್ಯಮಕ್ಕೆ ಸಂಬಂಧ ಕುರಿತು ವಿದೇಶ ಪ್ರಯಾಣ ಮಾಡುತ್ತಾರೆ.
– ತುಲಾ: ಯಾವುದೇ ವ್ಯಾಪಾರ ತೆರಿಗೆ, ಆದಾಯ ತೆರಿಗೆ, ಸರ್ಕಾರಿ ಕ್ಷೇತ್ರದ ಅಧಿಕಾರಿಗಳು, ವಾಣಿಜ್ಯ ಮತ್ತು ಅರ್ಥ ಶಾಸ್ತ್ರ, ಜ್ಯೋತಿಷ್ಯ ವಿದ್ಯೆಗಳಲ್ಲಿ ವಿಶೇಷ ಜ್ಞಾನ ಪಡೆದವರಾಗಿರುತ್ತಾರೆ.
– ವೃಶ್ಚಿಕ: ಹಲವಾರು ಧರ್ಮಕಾರ್ಯಗಳನ್ನು ಮಾಡುವವರು, ರಾಜಕೀಯ ಮತ್ತು ಧರ್ಮಕ್ಷೇತ್ರಗಳಲ್ಲಿ ನಾಯಕರು, ದೀರ್ಘಾಯುಷ್ಯವಂತರು ಆಗಿರುತ್ತಾರೆ.
– ಧನಸ್ಸು: ತಮ್ಮ ಪ್ರಯತ್ನದಿಂದ ಅನೇಕ ವಾಹನ ಮತ್ತು ಮನೆಗಳನ್ನು ಹೊಂದುವ ಭಾಗ್ಯವಂತರಾಗಿದ್ದು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ, ಮತ್ತು ಇವರ ತಾಯಿಯು ಸಹಸ್ರ ಹುಣ್ಣಿಮೆ ಕಾಣುವ ಭಾಗ್ಯವಿದೆ. ಇವರು ನೀರಿನ ಸಮೀಪವಿದ್ದರೆ ಉತ್ತಮ ಫಲ ಹೆಚ್ಚು.
– ಮಕರ: ಇವರು ಬಾಲ್ಯದಿಂದಲೇ ತುಂಬಾ ಕಷ್ಟ ಪಟ್ಟು ನಂತರ ಹಂತ ಹಂತವಾಗಿ ಅಭಿವೃದ್ಧಿ ಹೊಂದಿ ಪ್ರತಿಷ್ಟಿತ ಮನೆತನದ ಕನ್ಯೆಯೊಡನೆ ವಿವಾಹವಾದ ನಂತರ ಅಭಿವೃದ್ಧಿಯಾಗುವರು.
– ಕುಂಭ: ಹುಟ್ಟಿನಿಂದಲೇ ಇವರಿಗೆ ಚಕ್ರವರ್ತಿ ಯೋಗ ಉಂಟಾಗುತ್ತದೆ. ಇವರು ಸಣ್ಣ ವಯಸ್ಸಿನಲ್ಲಿ ವಿದ್ಯೆಯಲ್ಲಿ ಪದವಿಗಳನ್ನು ಪಡೆದು ರಾಜಕೀಯದಲ್ಲಿ ಕ್ಷಿಪ್ರ ಗತಿಯಲ್ಲಿ ಮೇಲಕ್ಕೆ ಬಂದು ಅಧಿಕಾರ ಪಡೆಯುತ್ತಾರೆ.
– ಮೀನ: ಅದೃಷ್ಟವೇ ಇವರನ್ನು ಹುಡುಕಿಕೊಂಡು ಬರುತ್ತದೆ. ಉದ್ಯಮ, ಧಾರ್ಮಿಕ ಕ್ಷೇತ್ರಗಳಲ್ಲಿ ನಾಯಕರು, ಅಧಿಕಾರಿಗಳು ಆಗುವ ಸಾಧ್ಯತೆ ಇದೆ. ರಾಜಕೀಯದಲ್ಲಿ ದಿಡೀರನೇ ಪ್ರಭಾವಿತ ವ್ಯಕ್ತಿಯಾಗುತ್ತಾರೆ.
ನವಧಾನ್ಯದ ದಾನವೇ ಶ್ರೇಷ್ಠ, ದಾನ ಕೊಟ್ಟರೆ ನಿಮ್ಮ ಆರೋಗ್ಯ ಸುಧಾರಿಸುತ್ತದೆಯೇ?