ಬೆಂಗಳೂರು: ವೈವಿಧ್ಯದ ತೊಟ್ಟಿಲಾಗಿರುವ ಭಾರತ ದೇಶದ ಪ್ರವಾಸವು ಎಂದಿಗೂ ಮುಗಿಯದ ಕಲಿಕೆಗೆ ಎಡೆಮಾಡಿಕೊಡುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಗುರುವಾರ ಹೇಳಿದರು.
ಶೇಷಾದ್ರಿಪುರಂ ಕಾಲೇಜಿನಲ್ಲಿ ಎಬಿವಿಪಿ ವತಿಯಿಂದ “ರಾಷ್ಟ್ರೀಯ ಏಕಾತ್ಮಕ ಯಾತ್ರೆ- 2023″ರ ಪ್ರಯುಕ್ತ ಏರ್ಪಡಿಸಲಾಗಿದ್ದ ‘ನಾಗರಿಕ ಅಭಿನಂದನಾ ಕಾರ್ಯಕ್ರಮ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ದೇಶವು, ನೂರಾರು ಭಾಷೆಗಳು, ಉಪಭಾಷೆಗಳು, ವಿಭಿನ್ನ ನಂಬಿಕೆಗಳು ಹಾಗೂ ಆಚಾರ ವಿಚಾರಗಳಿಂದ ಕೂಡಿದೆ. ಇವು ಭಾರತೀಯತೆಗೆ ಅನನ್ಯತೆಯನ್ನು ತಂದುಕೊಟ್ಟಿವೆ. ಈ ವೈವಿಧ್ಯವು ಭಾರತದ ಏಕಾತ್ಮಕತೆಯ ಅಂತ:ಸತ್ವವಾಗಿದೆ ಎಂದು ವಿವರಿಸಿದರು.
“ವಿದ್ಯಾರ್ಥಿಗಳಿಗೆ ಬೇರೊಂದು ರಾಜ್ಯದಲ್ಲಿ ಬದುಕಿದ ಅನುಭವಗಳು” (ಸ್ಟೂಡೆಂಟ್ ಎಕ್ಸ್ಪೀರಿಯನ್ಸ್ ಇನ್ ಇಂಟರ್ಸ್ಟೇಟ್ ಲಿವಿಂಗ್) ನಂತಹ ಕಾರ್ಯಕ್ರಮಗಳು ಬೇರೆ ಸಂಸ್ಕೃತಿ ಆಹಾರ ಕ್ರಮಗಳು ಇತ್ಯಾದಿಗಳನ್ನು ಗೌರವಿಸುವ ಮನೋಭಾವ ಬೆಳೆಸುತ್ತವೆ ಎಂದರು.
ಕರ್ನಾಟಕ ರಾಜ್ಯವು ಹಿಂದಿನಿಂದಲೂ ಬೇರೆ ರಾಜ್ಯಗಳ ಸಂಸ್ಕೃತಿಗಳನ್ನು ಗೌರವದಿಂದ ಕಾಣುತ್ತಾ ಬಂದಿದೆ. ಅದರಲ್ಲೂ, ದೇಶದ ಈಶಾನ್ಯ ರಾಜ್ಯಗಳ ಜನರು ಶಿಕ್ಷಣಕ್ಕಾಗಿ, ಕೌಶಲ ಕಲಿಯುವುದಕ್ಕಾಗಿ ಹಾಗೂ ಜೀವನೋಪಾಯಕ್ಕಾಗಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆ ರಾಜ್ಯಗಳ ಜನರಿಗೆ ಕರ್ನಾಟಕವೇ ಎರಡನೇ ತವರು ನೆಲವಾಗಿದೆ ಎಂದು ಸಚಿವ ನಾರಾಯಣ ನೋಡಿದರು.
ಇದೇ ಸಂದರ್ಭದಲ್ಲಿ, ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳಿಗಾಗಿ ಇಲ್ಲಿನ ಜ್ಞಾನಭಾರತಿ ವಿವಿ ಕ್ಯಾಂಪಸ್ ನಲ್ಲಿ ಪ್ರತ್ಯೇಕ ಹಾಸ್ಟೆಲ್ ಕಟ್ಟಡ ನಿರ್ಮಿಸಿ ಸೂಕ್ತ ವ್ಯವಸ್ಥೆ ಮಾಡಿರುವ ಬಗ್ಗೆ ಗಮನ ಸೆಳಿದರು.
ಮಹಾರಾಣಿ ಕ್ಲಸ್ಟರ್ ವಿವಿ ಉಪಕುಲಪತಿ ಡಾ. ಗೋಮತಿದೇವಿ, ಎಬಿವಿಪಿ ಮಿಜೋರಾಂ ಪ್ರಾಂತ ಸಂಘಟನಾ ಮಂತ್ರಿ ಮಂಜುನಾಥ್ ಮಂಗಳಗಿ, ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಹಾಲಕ್ಷ್ಮಿ, ಸಂಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ನೃಪತುಂಗ ವಿವಿಯ ಶ್ರೀನಿವಾಸ ಬಳ್ಳಿ, ಡಾ. ರಾಮಚಂದ್ರ, ಪ್ರೊ. ರಮೇಶ್ ಎಂ ಮತ್ತಿತರರು ಇದ್ದರು