ಹಲವು ನಗರಗಳಲ್ಲಿ ಪ್ರಯೋಗ ನಡೆಸಿದ ನಂತರ ಮುಕೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಜಿಯೋ, ಬ್ರಾಡ್ಬಾಂಡ್ ಸೇವೆ ನೀಡುವ ಜಿಯೋ ಗಿಗಾಫೈಬರ್(Jio GigaFiber) ಅನ್ನು ಆಗಸ್ಟ್ 12 ರಂದು ಅಧಿಕೃತವಾಗಿ ಮಾರುಕಟ್ಟೆಗೆ ತರಲು ಸನ್ನದ್ಧವಾಗಿದೆ.
ಜಿಯೋ ಗಿಗಾಫೈಬರ್ ಬಗ್ಗೆ ಕಂಪನಿಯು ಕಳೆದ ವರ್ಷ ಜೆನೆರಲ್ ಸಭೆಯಲ್ಲಿ ಪ್ರಕಟಗೊಳಿಸಿತ್ತು. ಸುಮಾರು 1100 ನಗರಗಳಲ್ಲಿ ಆರಂಭಿಕವಾಗಿ ಗಿಗಾಫೈಬರ್ ಅನ್ನು ಹೊರತರಲು ಉದ್ದೇಶಿಸಿತ್ತು. ಜಿಯೋ ಗಿಗಾಫೈಬರ್ ಒಂದು ಸೆಕೆಂಡಿಗೆ ಒಂದು ಗಿಗಾಬೈಟ್ (1GB/S) ಇಂಟರ್ನೆಟ್ ಸೇವೆ ನೀಡುತ್ತದೆ, ಜೊತೆಗೆ ಇತರೆ ವಿಶೇಷ ಸೇವೆಗಳಾದ ಟೆಲಿವಿಷನ್, ಲ್ಯಾಂಡ್ಲೈನ್, ಸ್ವಯಂ ಚಾಲಿತ ಸ್ಮಾಟ್ ಹೋಮ್ ಸೇವೆಗಳನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿತ್ತು.
ಜಿಯೋ ಗಿಗಾಫೈಬರ್ ನಿಂದ ಏನೆಲ್ಲಾ ನಿರೀಕ್ಷಿಸಬಹುದು ನೋಡಿ
ಮರುಪಾವತಿ ಪಡೆಯಬಹುದಾದ ಠೇವಣಿ
ಪೂರ್ವವೀಕ್ಷಣೆ ಆಫರ್ ಅಡಿಯಲ್ಲಿ ಜಿಯೋ ಗಿಗಾಫೈಬರ್ ಬ್ರಾಡ್ಬ್ಯಾಂಡ್ ಸೇವೆ ಯಾವುದೇ ಹಣ ಪಾವತಿ ಮಾಡದೆ ಸಿಗಲಿದೆ. ಆದರೆ ಸಂಪರ್ಕ ಪಡೆಯಲು ಮಾತ್ರ ಬಳಕೆದಾರರು ಮರುಪಾವತಿ ಆಗುವ ಹಣ ರೂ.4500 ಅನ್ನು ಪಾವತಿಸಬೇಕಾಗುತ್ತದೆ. ಆ ಹಣ ಬಳಕೆದಾರರಿಗೆ ಮರುಪಾವತಿ ಆಗುತ್ತದೆ ಅಥವಾ ಅದೇ ಹಣದಲ್ಲಿ ವಿವಿಧ ಬಗೆಯ ಸೇವೆಗಳನ್ನು ವಿವಿಧ ಪ್ಯಾಕೇಜ್ಗಳಲ್ಲಿ ಪಡೆಯಬಹುದು.
ಡಾಟಾ ಪ್ಲಾನ್ಗಳು
ಜಿಯೋ ಗಿಗಾಫೈಬರ್ ಡಾಟಾ ಪ್ಲಾನ್ಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಪ್ರಕಟಿಸಿಲ್ಲ. ಅಲ್ಲದೇ ಪೂರ್ವವೀಕ್ಷಣ ಪ್ಲಾನ್ನಲ್ಲಿ ಇಂಟರ್ನೆಟ್ ವೇಗ ಎಷ್ಟು ಎಂಬುದನ್ನು ಖಚಿತಪಡಿಸಿಲ್ಲ. ಆದರೆ ಗಿಗಾಫೈಬರ್ ಪ್ಲಾನ್ಗಳು ಮೂರು ತಿಂಗಳ ಪ್ಲಾನ್, ಅರ್ಧವಾರ್ಷಿಕ ಪ್ಲಾನ್, ವಾರ್ಷಿಕ ಪ್ಲಾನ್ ನಲ್ಲಿ ಇರುವ ಸಾಧ್ಯತೆಗಳಿವೆ.
ಇತರೆ ವಿಶೇಷ ಸೇವೆಗಳು
ಮೊದಲೇ ಹೇಳಿದಂತೆ ಜಿಯೋ ಗಿಗಾಫೈಬರ್ ಬ್ರಾಡ್ಬ್ಯಾಂಡ್ ಸೇವೆಯಲ್ಲಿ ಗಿಗಾಟಿವಿ, ಹೋಮ್ ಆಟೋಮೇಷನ್ ಮತ್ತು ಲ್ಯಾಂಡ್ಲೈನ್ ಸೇವೆ ಸಿಗಲಿವೆ.
– ಕಂಪನಿ ಹೇಳಿರುವ ಪ್ರಕಾರ ಜಿಯೋ ಗಿಗಾಟಿವಿ ಸೆಟ್-ಟಾಪ್-ಬಾಕ್ಸ್, ಡಿಜಿಟಲ್ ಟೆಲಿವಿಷನ್ ಕಂಟೆಂಟ್ ಸೇವೆಯನ್ನು ಇಂಟರ್ನೆಟ್ ಆಧಾರಿತವಾಗಿ ಜಿಯೋದ ಆಪ್ಗಳ ಜೊತೆಗೆ ನೀಡಲಿದೆ. ಸೆಟ್-ಟಾಪ್-ಬಾಕ್ಸ್ ವಿಡಿಯೋ ಕರೆ ಫೀಚರ್ ಒದಗಿಸಲಿದ್ದು, ಟಿವಿ ಮೂಲಕ ವಿಡಿಯೋ ಕರೆ ಮಾಡಬಹುದು. ವಿಶೇಷ ಸಂಗತಿ ಏನೆಂದರೆ ಟಿವಿಗಳು ಕ್ಯಾಮೆರಾ ಹೊಂದಿಲ್ಲದಿದ್ದರಿಂದ, ಈ ಫೀಚರ್ ಹೇಗೆ ಕಾರ್ಯನಿರ್ವಹಿಸಲಿದೆ ಕಾದು ನೋಡಬೇಕಿದೆ. ಅಮೆಜಾನ್ ಫೈಯರ್ ಸ್ಟಿಕ್ ರಿಮೋಟ್ ರೀತಿ ಗಿಗಾಟಿವಿ ರಿಮೋಟ್ ವಾಯ್ಸ್ ಸಪೋರ್ಟ್ ಫೀಚರ್ ಹೊಂದಿದೆ.
ಜಿಯೋ ಗಿಗಾಫೈಬರ್ ಇತರೆ ಹಲವು ವಿಶೇಷ ಫೀಚರ್ಗಳನ್ನು ಹೊಂದಿದ್ದು, ಅವುಗಳನ್ನು ತಿಳಿಯಲು ಆಗಸ್ಟ್ 12 ವರೆಗೆ ಕಾಯಬೇಕಿದೆ. ಫ್ಲಿಪ್ಕಾರ್ಟ್ನಲ್ಲಿ ಅಧಿಕೃತವಾಗಿ ಮಾರಾಟವಾಗಲಿದೆ ಎಂದು ಮಾಹಿತಿ ಹರಿದಾಡುತ್ತಿದೆ.
ಜಿಯೋ ಗಿಗಾಫೈಬರ್ ಎಂದರೇನು? (What is Gio GigaFiber?)
ರಿಲಾಯನ್ಸ್ ನ ಜಿಯೋ ಗಿಗಾಫೈಬರ್, ಇಂಟರ್ನೆಟ್ ರೂಟರ್ನಂತೆ ಇಂಟರ್ನೆಟ ಡಾಟಾ ಸೇವೆ ನೀಡುವ ತಂತ್ರಜ್ಞಾನ. ಫೈಬರ್ ಮುಂದಿನ ಪೀಳಿಗೆಯ ಅತ್ಯಾಧುನಿಕ ತಂತ್ರಜ್ಞಾನವಾಗಿದ್ದು, ಇದರ ವಿಶೇಷತೆ ಎಂದರೆ ಕಂಪನಿ ಹೇಳಿರುವ ಪ್ರಕಾರ ಒಂದು ಸೆಕೆಂಡಿಗೆ ಒಂದು ಗಿಗಾಬೈಟ್ ಡಾಟಾ ಸೇವೆಯನ್ನು ನೀಡುತ್ತದೆ ಎಂಬುದು. ಅಂದರೆ ಒಂದು ಸೆಕೆಂಡ್ನಲ್ಲಿ ಇಂಟರ್ನೆಟ್ನಲ್ಲಿ 1GB ಗಾತ್ರದ ವಿಡಿಯೋ, ಗೇಮ್, ಇತರೆ ಮಾಹಿತಿಗಳನ್ನು ಪಡೆಯಬಹುದು ಎಂದರ್ಥ.