ಕರ್ನಾಟಕ ಸರ್ಕಾರದ ಇಲಾಖೆಗಳಲ್ಲಿ ನೇಮಕ ಮಾಡುವ ಪ್ರಥಮ ದರ್ಜೆ ಸಹಾಯಕ ಹುದ್ದೆಗಳನ್ನು ಎಫ್‌ಡಿಎ ಎಂದು ಶಾರ್ಟ್ ಫಾರ್ಮ್‌ನಲ್ಲಿ ಕರೆಯಲಾಗುತ್ತದೆ. ಈ ಹುದ್ದೆಗೆ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಅರ್ಹತೆ, ವೇತನ, ಪರೀಕ್ಷೆ ಮಾದರಿ, ಪಠ್ಯಕ್ರಮದ ಡೀಟೇಲ್ಸ್ ಇಲ್ಲಿದೆ.
ಎಫ್‌ಡಿಎ / ಸಹಾಯಕ ಹುದ್ದೆಗೆ ವೇತನ ಶ್ರೇಣಿ : ರೂ.30350-58250.
ಪ್ರಥಮ ದರ್ಜೆ ಸಹಾಯಕ / ಎಫ್‌ಡಿಎ ಹುದ್ದೆಗೆ ವೇತನ ಶ್ರೇಣಿ : ರೂ.27650-52650.
ಎಫ್‌ಡಿಎ ಹುದ್ದೆಗೆ ಅರ್ಜಿ ಸಲ್ಲಿಸಲು ಜಾತಿವಾರು ಶುಲ್ಕ ಈ ಕೆಳಗಿನಂತೆ ಇರುತ್ತದೆ.
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.600.
- ಇತರೆ ಹಿಂದುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.300.
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
- ಅರ್ಜಿ ಶುಲ್ಕದ ಜೊತೆಗೆ ಎಲ್ಲಾ ಅಭ್ಯರ್ಥಿಗಳು ಪ್ರೋಸೆಸಿಂಗ್ ಚಾರ್ಜ್ ರೂ.35 ಪಾವತಿಸಬೇಕು.
ಎಫ್‌ಡಿಎ ಹುದ್ದೆಗೆ ವಿದ್ಯಾರ್ಹತೆ
ಪ್ರಥಮ ದರ್ಜೆ ಸಹಾಯಕ / ಎಫ್‌ಡಿಎ / ಸಹಾಯಕರು ಹುದ್ದೆಗೆ ಪದವಿ ಪರೀಕ್ಷೆಯಲ್ಲಿ ತೇರ್ಗಡೆ ಆಗಿರಬೇಕು. ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಪಡೆದಿರುವವರು ಅರ್ಜಿ ಹಾಕಬಹುದು.
ಎಫ್‌ಡಿಎ ಹುದ್ದೆಗೆ ವಯಸ್ಸಿನ ಅರ್ಹತೆಗಳು
- ಕನಿಷ್ಠ 21 ವರ್ಷ ವಯಸ್ಸಾಗಿರಬೇಕು.
- ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ.
- ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ.
- ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ.
ಎಫ್‌ಡಿಎ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಮಾದರಿ
ಸ್ಪರ್ಧಾತ್ಮಕ ಪರೀಕ್ಷೆಗಳು ವಿವರಣಾತ್ಮಕ ಮತ್ತು ವಸ್ತು ನಿಷ್ಠ ಬಹು ಆಯ್ಕೆ ಮಾದರಿಯ ಈ ಕೆಳಕಂಡ ಪತ್ರಿಕೆಗಳನ್ನು ಹೊಂದಿರುತ್ತದೆ.
ಪತ್ರಿಕೆ-1 : ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ – 150 ಅಂಕಗಳಿಗೆ ವಿವರಣಾತ್ಮಕ ಪತ್ರಿಕೆ ಇದಾಗಿರುತ್ತದೆ.
ಕನ್ನಡ ಮಾಧ್ಯಮದಲ್ಲಿ ಓದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆಯಾಗಿ ಓದಿ ಉತ್ತೀರ್ಣರಾಗದ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ ಬರೆಯಬೇಕಿರುತ್ತದೆ. ಅಥವಾ ಕೆಪಿಎಸ್‌ಸಿ ಈ ಹಿಂದೆ ನಡೆಸಿದ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು, ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದರಿಂದ ವಿನಾಯಿತಿ ಹೊಂದಿರುತ್ತಾರೆ.
ಪತ್ರಿಕೆ-2 : ಸಾಮಾನ್ಯ ಕನ್ನಡ / ಸಾಮಾನ್ಯ ಇಂಗ್ಲಿಷ್ – 100 ಅಂಕಗಳಿಗೆ ವಸ್ತು ನಿಷ್ಠ ಬಹು ಆಯ್ಕೆ ಮಾದರಿ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಪತ್ರಿಕೆ-3 : ಸಾಮಾನ್ಯ ಜ್ಞಾನ – 100 ಅಂಕಗಳಿಗೆ ವಸ್ತು ನಿಷ್ಠ ಬಹು ಆಯ್ಕೆ ಮಾದರಿ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಪರೀಕ್ಷಾ ಅವಧಿ – 01-30 ಗಂಟೆಗಳು.
ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-2 ರ ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲಿಷ್ ಇವುಗಳಲ್ಲಿ ಯಾವುದಾದರೂ ಒಂದು ಪತ್ರಿಕೆಗೆ ಮಾತ್ರ ಉತ್ತರಿಸಬೇಕು. ಪರೀಕ್ಷಾ ಸಮಯದಲ್ಲಿ ಅಭ್ಯರ್ಥಿಗಳು ಓ.ಎಂ.ಆರ್ ಹಾಳೆಯಲ್ಲಿ ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲಿಷ್ ಯಾವುದಾದರೂ ಒಂದನ್ನು ನಮೂದಿಸಬೇಕು.
ಪತ್ರಿಕೆ-1 – ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಗೆ ಪಠ್ಯಕ್ರಮ
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಗೆ ಪಠ್ಯಕ್ರಮ ಮತ್ತು ಯಾವ ವಿಷಯದಲ್ಲಿ ಎಷ್ಟು ಅಂಕಗಳಿಗೆ ಪ್ರಶ್ನೆ ಕೇಳಲಾಗುತ್ತದೆ ಎಂದು ಈ ಕೆಳಗಿನಂತೆ ನೀಡಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ಪ್ರಥಮ ಭಾಷೆಯ ಮಟ್ಟದ ವಿವರಣಾತ್ಮಕ ಪತ್ರಿಕೆ ಇದಾಗಿರುತ್ತದೆ.
ವಿಷಯದ ಸಮಗ್ರ ಅರ್ಥೈಸುವಿಕೆ – 25 ಅಂಕಗಳು
ಪದ ಪ್ರಯೋಗ – 25 ಅಂಕಗಳು
ವಿಷಯ ಸಂಕ್ಷೇಪಣೆ – 25 ಅಂಕಗಳು
ಪದ ಜ್ಞಾನ – 25 ಅಂಕಗಳು
ಲಘು ಪ್ರಬಂಧ – 25 ಅಂಕಗಳು
ಇಂಗ್ಲಿಷಿನಿಂದ ಕನ್ನಡಕ್ಕೆ ಭಾಷಾಂತರ – 25 ಅಂಕಗಳು
ಪತ್ರಿಕೆ-2 : ಸಾಮಾನ್ಯ ಕನ್ನಡ / ಸಾಮಾನ್ಯ ಇಂಗ್ಲಿಷ್ ಪಠ್ಯಕ್ರಮ
ಅಭ್ಯರ್ಥಿಗಳು ಪತ್ರಿಕೆ ಎರಡಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲಿಷ್ ಎರಡರಲ್ಲಿ ಒಂದಕ್ಕೆ ಮಾತ್ರ ಉತ್ತರಿಸಬೇಕಿರುತ್ತದೆ.
ಪಠ್ಯಕ್ರಮ
ಸಾಮಾನ್ಯ ಕನ್ನಡ / ಸಾಮಾನ್ಯ ಇಂಗ್ಲಿಷ್ ಪತ್ರಿಕೆಯು ಸಾಮಾನ್ಯವಾಗಿ ವಿಶ್ವವಿದ್ಯಾಲಯ ಪದವಿ ಪರೀಕ್ಷೆಯಲ್ಲಿ ಪಾಸ್ ಆದ ವಿದ್ಯಾರ್ಥಿಗೆ ಇರಬೇಕಾದ ಕನಿಷ್ಠ ವಿದ್ಯಾರ್ಹತೆಗೆ ಸಮನಾಗಿರುತ್ತದೆ. ಕನ್ನಡ / ಇಂಗ್ಲಿಷ್ ವ್ಯಾಕರಣ, ಶಬ್ಧ ಸಂಪತ್ತು, ಕಾಗುಣಿತ, ಸಮಾನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು ಇವುಗಳ ಪರಿಜ್ಞಾನದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಪತ್ರಿಕೆ-3 : ಸಾಮಾನ್ಯ ಜ್ಞಾನ ಪಠ್ಯಕ್ರಮ
ಸಾಮಾನ್ಯ ಜ್ಞಾನ ಪತ್ರಿಕೆಯು ಸಾಮಾನ್ಯವಾಗಿ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ವಿದ್ಯಾರ್ಥಿಗೆ ಇರಬೇಕಾದ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುತ್ತದೆ. ಭಾರತದ ಸಂವಿಧಾನ, ಭಾರತದ ಇತಿಹಾಸ ಮತ್ತು ಸಂಸ್ಕೃತಿ, ಭಾರತದ ಸಾಮಾನ್ಯ ಹಾಗೂ ಆರ್ಥಿಕ, ಭೂಗೋಳ ಶಾಸ್ತ್ರ, ಇತ್ತೀಚಿನ ಘಟನೆಗಳು, ದೈನಿಕ ಜೀವನದಲ್ಲಿ ವಿಜ್ಞಾನ. ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.