ನಮ್ಮ ಹಿಂದೂ ಧರ್ಮದಲ್ಲಿ ಕುಜ ದೋಷವನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಕುಜದೋಷವು ವ್ಯಕ್ತಿಯ ಜೀವನ ಮತ್ತು ಮದುವೆ ಮೇಲೆ ಪರಿಣಾಮ ಬೀರುತ್ತದೆ. ಹಾಗೂ ಈ ಕುಜದೋಷದಿಂದ ತುಂಬ ಕೆಡುಕಾಗುತ್ತದೆ ಎಂಬ ಮಾತಿದೆ. ಆದರೆ ಅದಕ್ಕೆ ಹೆದರುವ ಅಗತ್ಯವಿಲ್ಲ. ಏಕೆಂದರೆ ಕುಜದೋಷಕ್ಕು ಪರಿಹಾರಗಳಿವೆ. ಹಾಗೇ ನಿವಾರಣೆಗೆ ಕೆಲವು ಆಚರಣೆಗಳು ಸಹ ಇದೆ. ಅವುಗಳನ್ನು ಪಾಲಿಸಿದರೆ ಕುಜದೋಷವು ನಿವಾರಣೆಯಾಗುತ್ತೆ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವಂತೆ ಒಬ್ಬ ಮನುಷ್ಯನಿಗೆ ಒಂದಲ್ಲಾ ಒಂದು ದೋಷಗಳು ಇರುತ್ತದೆ. ಶನಿದೋಷ, ಕುಜದೋಷ, ಗುರುದೋಷ ಹೀಗೆ ವ್ಯಕ್ತಿಯ ಜೀವನವನ್ನು ಈ ಗ್ರಹಗಳು ಆಧರಿಸುತ್ತವೆ. ಇದರಲ್ಲಿ ಮುಖ್ಯವಾಗಿ ಕಂಡುಬರುವ ದೋಷವೆಂದರೆ ಕುಜ ದೋಷ ಇದನ್ನು ಮಂಗಳ ದೋಷ ಅಥವಾ ಮಾಂಗಲಿಕ ದೋಷವೆಂದೂ ಕರೆಯುತ್ತಾರೆ. ಕುಜದೋಷವಿರುವವರಿಗೆ ಮದುವೆಯಾಗುವುದಿಲ್ಲ ಅಥವಾ ಕುಜದೋಷವಿರುವವರನ್ನು ಮದುವೆಯಾದರೆ ಸಂಗಾತಿಯು ಕೆಲವೇ ದಿನಗಳಲ್ಲಿ ಮರಣವನ್ನಪ್ಪುತ್ತಾರೆ ಎಂಬ ನಂಬಿಕೆಗಳಿವೆ.
ಕುಜ ದೋಷ :- ಕುಜ ಎಂದರೆ ಅಗ್ನಿ ತತ್ವದ ಗ್ರಹ. ಕುಜ ದೋಷವನ್ನು ಜನ್ಮಕುಂಡಲಿಯಲ್ಲಿ ಲಗ್ನದಿಂದ ನೋಡಲಾಗುತ್ತದೆ. ಲಗ್ನದಲ್ಲಿ ಕುಜನು 1,2,4,7,8 ಹಾಗೂ 12ನೇ ಮನೆಯಲ್ಲಿದ್ದರೆ ಕುಜದೋಷವಿದೆ ಎಂದು ಹೇಳಲಾಗುತ್ತದೆ. ಪುರುಷರ ಜಾತಕದಲ್ಲಿ ಲಗ್ನದಲ್ಲಿ ಎರಡು, ಏಳು ಅಥವಾ ಎಂಟರಲ್ಲಿ ಕುಜನು ಇದ್ದರೆ ಉಗ್ರಸ್ವರೂಪದ ದೋಷ ಕಂಡುಬರುತ್ತದೆ. ಮಹಿಳೆಯರಲ್ಲಿ ಏಳು, ಎಂಟು ಹಾಗೂ ಹನ್ನೆರಡನೇ ಮನೆಯಲ್ಲಿದ್ದರೆ ಕುಜ ದೋಷದ ಸ್ವರೂಪ ಹೆಚ್ಚಾಗಿರುತ್ತದೆ. ಮಾಂಗಲಿಕ ದೋಷವಿರುವವರಿಗೆ ಮಂಗಳಗ್ರಹವು ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಮಂಗಳಕಾರ್ಯದಲ್ಲಿ ತೊಡಕುಗಳು ಎದುರಾಗುತ್ತದೆ.
ಕುಜ ದೋಷವಿರದ ನಕ್ಷತ್ರಗಳು: –
ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಯಾ, ಆಶ್ಲೇಷಾ, ಉತ್ತರಾ, ಸ್ವಾತಿ, ಅನೂರಾಧ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಉತ್ತರಭಾದ್ರಾ ನಕ್ಷತ್ರದವರಿಗೆ ಕುಜದೋಷವಿದ್ದರೂ ಶಾಂತಿ ಮಾಡಿಸಿಕೊಳ್ಳುವ ಅಗತ್ಯವಿಲ್ಲ.
ಕುಜದೋಷದ ಲಕ್ಷಣಗಳು :-
• ಎರಡನೆಯ ಮನೆಯಲ್ಲಿ ಕುಜನಿದ್ದರೆ ವ್ಯಕ್ತಿಯ ಮದುವೆ ಹಾಗೂ ವೃತ್ತಿ ಜೀವನದಲ್ಲಿ ಸಮಸ್ಯೆಯಾಗಬಹುದು, ಮಂಗಳ ಗ್ರಹವು ಎರಡನೇ ಮನೆಯಲ್ಲಿದ್ದರೆ ವ್ಯಕ್ತಿಯ ಕುಟುಂಬದೊಂದಿಗಿನ ಸಂಬಂಧದೊಂದಿಗೆ ಪರಿಣಾಮ ಬೀರುವುದು. ಇದು ಸಂಗಾತಿಗಳನ್ನು ಬೇರ್ಪಡಿಸಬಹುದು ಅಥವಾ ಪದೇ ಪದೇ ಜಗಳವನ್ನುಂಟು ಮಾಡಬಹುದು.
• ಜನ್ಮಕುಂಡಲಿಯ ಮೊದಲ ಮನೆಯಲ್ಲಿ ಕುಜನಿದ್ದರೆ ವೈವಾಹಿಕ ಜೀವನದಲ್ಲಿ ಕಲಹ ಹಾಗೂ ಹಿಂಸೆ ಕಂಡುಬರುತ್ತದೆ. ಜಾತಕದಲ್ಲಿ ಒಂದನೇ ಮನೆಯಲ್ಲಿ ಮಂಗಳ ಗ್ರಹವಿರುವವರು ಆಕ್ರಣಕಾರಿಗಳು ಮತ್ತು ಅಸಭ್ಯರಾಗಿರುವವರು. ಜೀವನದಲ್ಲಿ ಸಂತೋಷ ಕಳೆದುಕೊಳ್ಳುವುದು 1ನೇ ಮನೆಯಲ್ಲಿ ಮಂಗಳವಿರುವ 4ನೇ ಅಂಶದ ಲಕ್ಷಣ . 7ನೇ ಅಂಶವೆಂದರೆ ಚಿಂತೆ ಹಾಗೂ ಪತಿ ಹಾಗೂ ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ತಂದಿಡುವುದು. ಎಂಟನೇ ಅಂಶವೆಂದರೆ ನಿಮ್ಮ ಸುಖ ಜೀವನದ ಮೇಲೆ ಅಪಾಯವನ್ನು ತಂದಿಡಬಹುದು.
• ನಾಲ್ಕನೇ ಮನೆಯಲ್ಲಿ ಕುಜನಿದ್ದರೆ ವೃತ್ತಿಯಲ್ಲಿ ಯಶಸ್ಸು ಸಿಗದು ಹಾಗೂ ಪದೇ ಪದೇ ಉದ್ಯೋಗ ಬದಲಿಸಬೇಕಾಗಬಹುದು. ಮಂಗಳನು ನಾಲ್ಕನೇ ಮನೆಯಲ್ಲಿದ್ದರೆ ಸ್ಥಿರ ಸಂಪತ್ತು ಹಾಗೂ ಸಮೃದ್ಧಿ ಕಂಡುಬರುವುದು, ಆದರೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುವವು.
• ಕುಜನು ಏಳನೇ ಮನೆಯಲ್ಲಿದ್ದರೆ ವ್ಯಕ್ತಿಯ ಶಕ್ತಿಯು ಕ್ರೋಧದಲ್ಲಿ ವ್ಯಯವಾಗುವುದು, ತನ್ನಲ್ಲಿರುವ ಅಧಿಕಾರ ಸ್ಥಾಪಿಸುವ ಗುಣದಿಂದಾಗಿ ಮನೆಯಲ್ಲಿ ಹೊಂದಾಣಿಕೆ ಕಂಡುಬರದು. ಈ ದೋಷವಿರುವವರು ಅನಾರೋಗ್ಯ ಹೊಂದಿರುವ ಪತ್ನಿಯನ್ನು ಪಡೆಯಬಹುದು ಅಥವಾ ಮಹಿಳೆಯರಿಗೆ ದೋಷವಿದ್ದರೆ ಬಹಳ ಕೋಪಿಷ್ಠ ಪತಿ ಸಿಗಬಹುದು
ಕುಜ ದೋಷ ಪರಿಹಾರ ಕ್ರಮಗಳು ಈ ರೀತಿ ಇದೆ :-
• ಮಂಗಲ ದೋಷವಿರುವ ಹುಡುಗ ಮತ್ತು ಹುಡುಗಿ ಮದುವೆಯಾದರೆ ದೋಷವು ನಿವಾರಣೆಯಾಗುವುದು.
• ಕುಂಭ ವಿವಾಹ: ಮದುವೆಯಾಗುವ ಹುಡುಗ ಅಥವಾ ಹುಡುಗಿಗೆ ಜಾತಕದಲ್ಲಿ ಮಂಗಲ ದೋಷ ಕಂಡು ಬಂದರೆ, ದೋಷದ ಋಣಾತ್ಮಕ ಪರಿಣಾಮಗಳನ್ನು ನಿವಾರಿಸಲು ಕುಂಭ ವಿವಾಹ ಎನ್ನುವ ವಿಧಿಯನ್ನು ಮಾಡಲಾಗುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ ದೋಷವಿರುವ ವ್ಯಕ್ತಿಯು ಬಾಳೆಗಿಡ, ಅಶ್ವತ್ಥ ಮರ ಅಥವಾ ವಿಷ್ಣುವಿನ ಬೆಳ್ಳಿ ಅಥವಾ ಚಿನ್ನದ ಮೂರ್ತಿಯನ್ನು ವಿವಾಹವಾಗಬೇಕು
• ಕುಜದೋಷವಿರುವವರಿಗೆ ಕುಂಭ ವಿವಾಹ ಮಾಡಿದರೆ ದೋಷ ದೂರವಾಗುವುದು.
• ಕುಜದೋಷ ನಿವಾರಣೆಗೆ ಪರಿಣಾಮಕಾರಿ ಪರಿಹಾರವೆಂದರೆ ಮಂಗಳವಾರದ ಉಪವಾಸ. ದೋಷವಿರುವವರು ಈ ದಿನ ಉಪವಾಸ ಮಾಡಿ ಬರಿ ತೊಗರಿ ಬೇಳೆಯಿಂದ ಮಾಡಿದ ಆಹಾರವನ್ನು ಮಾತ್ರ ಸೇವಿಸಬೇಕು
• ಮಂತ್ರ ಪಠಣ :- ಕುಜದೋಷ ನಿವಾರಿಸಲು ಮಂಗಳವಾರ ಮಂಗಲ ಮಂತ್ರವನ್ನು ಪಠಿಸಬೇಕು. ” ಓಂ ಆಂ ಅಂಗಾರಕಾಯ ನಮಃ| ಓಂ ಭೌಂ ಭೌಮಾಯ ನಮಃ” ಈ ಮಂತ್ರವನ್ನು 108 ಬಾರಿ ಪಠಿಸಿದರೆ ಒಳ್ಳೆಯದು.
• ಕುಜ ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಪಠಿಸಿದರೆ ಕುಜ ದೋಷದ ಪ್ರಭಾವ ಕಡಿಮೆಯಾಗುವುದು’ಧರುಸುತಾಯ ವಿದ್ಮಹೇ ಋಣಹರಾಯ ಧೀಮಹಿ, ತನ್ನೋ ಕುಜಃ ಪ್ರಚೋದಯಾತ್’
• ಮಂಗಲಿಕ ದೋಷವಿರುವವರು ಮಂಗಳವಾರ ನವಗ್ರಹ ಮಂತ್ರ ಅಥವಾ ಹನುಮಾನ್ ಚಾಲೀಸವನ್ನು ಪಠಿಸಬೇಕು ನಮಃ ಸುರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ.
• ಮಂಗಳವಾರದಂದು ಪೂಜೆ ಮಾಡುವುದು ಹಾಗೂ ದೇವಸ್ಥಾನಗಳಿಗೆ ಹೋಗುವುದರಿಂದ ಮಂಗಲದೋಷವನ್ನು ಕಡಿಮೆ ಮಾಡಿಕೊಳ್ಳಬಹುದು
• ಜ್ಯೋತಿಷ್ಯದ ಪ್ರಕಾರ ಮಂಗಲ ದೋಷ ಅಥವಾ ಕುಜ ದೋಷವಿರುವವರು ಕೆಂಪು ಹವಳವಿರುವ ಬಂಗಾರದ ಉಂಗುರವನ್ನು ಬಲಗೈಯ ಉಂಗುರದ ಬೆರಳಿಗೆ ಧರಿಸಬೇಕು.
• ಕುಜದೋಷವಿರುವವರು 28ರ ಹರೆಯದ ನಂತರ ಮದುವೆಯಾಗಬೇಕು, ವಯಸ್ಸಾದಂತೆ ದೋಷದ ಪ್ರಭಾವವೂ ತಗ್ಗುವುದು.
• ಕುಜ ದೋಷವಿರುವವರು ಮಂಗಳವಾರದ ದಿನ ದಾನ ಮಾಡಿದರೆ ದೋಷದ ಪ್ರಭಾವ ತಗ್ಗುವುದು. ಕೆಂಪು ವಸ್ತ್ರ, ಆಹಾರ ಮುಖ್ಯವಾಗಿ ತೊಗರಿ ಬೇಳೆಯಿಂದ ಮಾಡಿದ ಆಹಾರ ಅಥವಾ ತೊಗರಿ ಬೇಳೆ ದಾನ ಮಾಡಬೇಕು.
• ಸುಬ್ರಹ್ಮಣ್ಯಸ್ವಾಮಿ ಕ್ಷೇತ್ರ ದರ್ಶನ ಹಾಗೂ ನರಸಿಂಹ ಸ್ವಾಮಿಯ ಆರಾಧನೆ ಮಾಡುವುದರಿಂದಲೂ ದೋಷದ ಪ್ರಭಾವ ತಗ್ಗುವುದು.
• ಮಹಾವಿಷ್ಣುವಿನ ಕಲ್ಯಾಣೋತ್ಸವ ಮಾಡಿಸುವುದರಿಂದಲೂ ಕುಜ ದೋಷ ನಿವಾರಣೆಯಾಗುವುದು.
ಸ್ವಾಭಾವಿಕ ಪರಿಹಾರಗಳು :-
ನಿಮ್ಮ ಜನ್ಮ ಜಾತಕದಲ್ಲಿ ಮೇಷ, ಸಿಂಹ, ವೃಶ್ಚಿಕ, ಮಕರ, ಕುಂಭ ರಾಶಿಗಳಲ್ಲಿ ಕುಜ ಗ್ರಹ ಇದ್ದರೆ, ಅದು ಲಗ್ನದಿಂದ 1, 4, 7, 8, 12ನೇ ಸ್ಥಾನಗಳೇ ಆಗಿದ್ದರೂ ದೋಷವು ಸ್ವಾಭಾವಿಕವಾಗಿಯೇ ನಿವಾರಣೆ ಆಗುತ್ತದೆ. ಅಂಥ ಸಂದರ್ಭದಲ್ಲಿ ಪ್ರತ್ಯೇಕವಾಗಿ ದೋಷ ಪರಿಹಾರ ಪೂಜೆಗಳನ್ನೇನೂ ಮಾಡುವ ಅಗತ್ಯವಿಲ್ಲ. ಕರ್ಕಾಟಕ, ಸಿಂಹ ಲಗ್ನದಲ್ಲಿ ಹುಟ್ಟಿದವರಿಗೆ ಕುಜ ದೋಷ ಇಲ್ಲ. ವೃಶ್ಚಿಕ, ಮಿಥುನ ಲಗ್ನದವರಿಗೆ ಹನ್ನೆರಡನೇ ಸ್ಥಾನದಲ್ಲಿ ಕುಜನಿದ್ದರೂ ದೋಷವಿಲ್ಲ.
ಮಹಿಳೆಯರಿಗೆ ಪಿಸಿಓಡಿ ಪ್ರಾಬ್ಲಮ್ ಇದ್ರೆ ಏನೆಲ್ಲ ಆಗುತ್ತೆ ಗೊತ್ತ? ಕಾರಣ, ಲಕ್ಷಣ ಮತ್ತು ಮುನ್ನೆಚ್ಚರಿಕೆ..