ಭಾರತದ 17ನೇ ಲೋಕಸಭಾ ಚುನಾವಣೆ ದಿನಾಂಕವು ಚುನಾವಣಾ ಆಯೋಗದಿಂದ ಹೊರಬಿದ್ದಿದೆ. ಮುಖ್ಯ ಚುನಾವಣೆ ಆಯುಕ್ತ ಸುನಿಲ್ ಅರೋರಾ ದಿಲ್ಲಿಯ ವಿಜ್ಞಾನ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಾರ್ವತ್ರಿಕ ಚುನಾವಣೆ 2019ರ ವೇಳಾಪಟ್ಟಿ ಪ್ರಕಟಿಸಿದರು.
ಈ ಭಾರಿಯ ಲೋಕಸಭಾ ಚುನಾವಣೆಯು ಒಟ್ಟು 07 ಹಂತಗಳಲ್ಲಿ ನಡೆಯಲಿದೆ. ಮೊದಲನೇ ಹಂತದ ಮತದಾನ 11ನೇ ಏಪ್ರಿಲ್ ನಿಂದ ಆರಂಭಗೊಳ್ಳಲಿದ್ದು, ಕೊನೆಯ ಹಂತದ ಮತದಾನ 19ನೇ ಮೇ ರಂದು ನಡೆಯಲಿದೆ. ಮೇ 23ರಂದು ಮತಗಳ ಎಣಿಕೆ ನಡೆಯಲಿದೆ.
ಏಪ್ರಿಲ್ 18 ರಂದು ಎರಡನೇ ಹಂತದ ಮತದಾನ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತ್ತು ಇನ್ನುಳಿದ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ಏಪ್ರಿಲ್ 23ರಂದು ಮೂರನೇ ಹಂತದಲ್ಲಿ ಮತದಾನ ಆಗಲಿದೆ.
3ನೇ ಹಂತದ ಚುನಾವಣೆ ಏಪ್ರಿಲ್ 23, 4ನೇ ಹಂತ ಚುನಾವಣೆ ಏಪ್ರಿಲ್ 29 , 5ನೇ ಹಂತ ಮೇ6 ರಂದು, ಮೇ 12ಕ್ಕೆ 6ನೇ ಹಂತದ ಚುನಾವಣೆ, 7ನೇ ಹಂತದ ಚುನಾವಣೆ ಮೇ 19ರಂದು ನಡೆಯಲಿದೆ.
ಮೊದಲ ಹಂತದಲ್ಲಿ 20 ರಾಜ್ಯಗಳ 91 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಚುನಾವಣೆ ಫಲಿತಾಂಶ ಪ್ರಕಟಣೆ ದಿನಾಂಕ : 23/05/2019
ಚುನಾವಣೆ ನೀತಿ ಸಂಹಿತೆ ದಿನಾಂಕ : 10/03/2019 ರಿಂದ ದಿನಾಂಕ :27/05/2019ರವರೆಗೆ ಜಾರಿಯಲ್ಲಿ ಇರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ.
1 ಹಂತದಲ್ಲಿ ಚುನಾವಣೆ ನಡೆಯುವ ರಾಜ್ಯಗಳು
ಆಂಧ್ರ, ಅರುಣಾಚಲ, ಗೋವಾ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಕೇರಳ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ, ತೆಲಂಗಾಣ, ತಮಿಳುನಾಡು, ಉತ್ತರಾಖಂಡ್, ಅಂಡಮಾನ್- ನಿಕೋಬಾರ್, ದಾದ್ರಾ ನಗರ್ಹವೇಲಿ, ದಮನ್ ಅಂಡ್ ದಿಯು, ಲಕ್ಷದ್ವೀಪ, ದಿಲ್ಲಿ. ಪುದುಚೇರಿ, ಚಂಡೀಗಢ.
2 ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು
ಕರ್ನಾಟಕ, ಮಣಿಪುರ, ರಾಜಸ್ಥಾನ, ತ್ರಿಪುರಾ.
3 ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು
ಅಸ್ಸಾಂ, ಛತ್ತೀಸ್ಗಢ.
4 ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು
ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ
5 ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು
ಜಮ್ಮು ಮತ್ತು ಕಾಶ್ಮೀರ
6 ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು
ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ.
2ನೇ ಹಂತದ ಚುನಾವಣೆ
ಕರ್ನಾಟಕ, ಮಣಿಪುರ, ರಾಜಸ್ಥಾನ, ತ್ರಿಪುರಾ. ಅಸ್ಸಾಂನ 5 ಸ್ಥಾನ, ಬಿಹಾರದ 5 ಸ್ಥಾನ, ಛತ್ತೀಸ್ಗಢ 3, ಜಮ್ಮು ಕಾಶ್ಮೀರ 2 ಸ್ಥಾನಗಳಿಗೆ ಚುನಾವಣೆ, ಕರ್ನಾಟಕದ 14 ಸ್ಥಾನಗಳಿಗೆ ಮತದಾನ ನಡೆಯಲಿದೆ.
ಮುಖ್ಯ ಚುನಾವಣೆ ಆಯುಕ್ತ ಸುನಿಲ್ ಅರೋರಾ ಅವರ ಸುದ್ದಿಗೋಷ್ಠಿಯ ಇತರೆ ಮುಖ್ಯಾಂಶಗಳು
– ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜತೆ ಸಮಗ್ರ ಚರ್ಚೆ ನಡೆಸಿದ ಬಳಿಕ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
– ಮತದಾರರ ಪಟ್ಟಿಗಳನ್ನು ಸಮಗ್ರವಾಗಿ ಪರಿಷ್ಕರಿಸಲಾಗುತ್ತಿದ್ದು ನಾಮಪತ್ರ ಸಲ್ಲಿಕೆಯ ಕೊನೆಯ ದಿನದ ವರೆಗೂ ಈ ಪ್ರಕ್ರಿಯೆ ಮುಂದುವರಿಯಲಿದೆ.
– 18-19 ವರ್ಷ ವಯಸ್ಸಿನ 1.5 ಕೋಟಿ ಮತದಾರರಿದ್ದಾರೆ. 99.6 ಶೇ ಮತದಾರರು ಗುರುತಿನ ಚೀಟಿ (ಎಪಿಕ್ ಕಾರ್ಡ್) ಹೊಂದಿದ್ದಾರೆ.
– ಸುಮಾರು 90 ಕೋಟಿ ಮತದಾರರು 2019ರ ಚುನಾವಣೆಯಲ್ಲಿ ಹಕ್ಕು ಚಲಾಯಿಸಲಿದ್ದಾರೆ: ಸಿಇಸಿ.
– ಫೋಟೋ ಸಹಿತ ಮತದಾರರ ಚೀಟಿಯನ್ನು ಮಾರ್ಗದರ್ಶನಕ್ಕಾಗಿ ಮಾತ್ರ ಬಳಸಬಹುದೇ ಹೊರತು ಮತಗಟ್ಟೆಯಲ್ಲಿ ಗುರುತಿನ ಚೀಟಿಯಾಗಿ ಬಳಸುವಂತಿಲ್ಲ.
– ಈ ಬಾರಿ ಎಲ್ಲ ಮತಗಟ್ಟೆಗಳಲ್ಲೂ ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗುತ್ತಿದ್ದು, ಸೂಕ್ತ ಭದ್ರತಾ ವ್ಯವಸ್ಥೆ.
– ದೇಶಾದ್ಯಂತ ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗುತ್ತದೆ. ಯಾವುದೇ ರೀತಿಯ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
– ಈ ಬಾರಿ 17.4 ಲಕ್ಷ ವಿವಿಪ್ಯಾಟ್ ಯಂತ್ರಗಳ ಬಳಕೆ.
– ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ಜನತೆಗೆ ಪರಿಚಯಿಸಲು ಕ್ರಮ.
– 16ನೇ ಲೋಕಸಭೆ ಅವಧಿ ಜೂನ್ 3ಕ್ಕೆ ಕೊನೆಗೊಳ್ಳುತ್ತದೆ.
– ಎಲ್ಲ ಪ್ರಮುಖ ಘಟನೆಗಳ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ.
– ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಎಲ್ಲ ಸಾಮಾಜಿಕ ಜಾಲತಾಣ ಖಾತೆಗಳ ವಿವರ ನೀಡಬೇಕಾಗುತ್ತದೆ.
– ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.