ಬೆಂಗಳೂರು: ಇಡೀ ಸಮಾಜ ಈಗ ಹಣದ ಹಿಂದೆ ಹೋಗುತ್ತಿದೆ. ಆದರೆ ಇದಕ್ಕಿಂತ ಮನೋದೈಹಿಕ ಆರೋಗ್ಯ ಮುಖ್ಯ ಎನ್ನುವ ಸತ್ಯವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ನಿಮ್ಹಾನ್ಸ್ ಸಂಸ್ಥೆಯು ಗುರುವಾರ ಏರ್ಪಡಿಸಿದ್ದ ‘ವಿಶ್ವ ಫಿಸಿಯೋಥೆರಪಿ ದಿನಾಚರಣೆ’ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ಫಿಸಿಯೋಥೆರಪಿ ಕಾಲೇಜನ್ನು ಆರಂಭ ಮಾಡುವ ಮೂಲಕವೇ ನಾನು ಸಾರ್ವಜನಿಕ ರಂಗಕ್ಕೆ ಬಂದೆ. ಫಿಸಿಯೋಥೆರಪಿ ಕ್ಷೇತ್ರವನ್ನು ನಾವು ಜನರ ಬಳಿಗೆ ತೆಗೆದುಕೊಂಡು ಹೋಗಬೇಕು. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆರೋಗ್ಯ ಮತ್ತು ವೆಲ್ನೆಸ್ ವಿಚಾರಗಳಿಗೆ ಮಹತ್ತ್ವ ಕೊಡಲಾಗಿದೆ” ಎಂದು ಅವರು ತಿಳಿಸಿದರು.
ಫಿಸಿಯೋಥೆರಪಿ ಸಾಧನಗಳನ್ನು ನಾವು ಸ್ಥಳೀಯ ಮಟ್ಟದಲ್ಲೇ ಉತ್ಪಾದಿಸಬೇಕಿದೆ. ಇದಕ್ಕಾಗಿ ಸೂಕ್ತ ಜನರ ಜತೆ ಸಹಭಾಗಿತ್ವ ಹೊಂದಬೇಕಾದ್ದು ಅಗತ್ಯವಾಗಿದೆ ಎಂದು ಅವರು ಸಲಹೆ ನೀಡಿದರು.
ಆಧುನಿಕ ಬದುಕಿನಲ್ಲಿ ದೇಹ, ಮನಸ್ಸು, ವೃತ್ತಿಗಳ ನಡುವೆ ಸಮನ್ವಯ ಸಾಧಿಸಬೇಕಾಗಿದೆ. ಇದು ನನಸಾಗಬೇಕು ಎಂದರೆ, ಎಲ್ಲವೂ ಸರಳವಾಗಿ ಜನಸ್ನೇಹಿ ಆಗಬೇಕು ಎಂದು ಅವರು ನುಡಿದರು.
ಫಿಸಿಯೋಥೆರಪಿ ಸೇವೆಗಳನ್ನು ಜನರಿಗೆ ಕೈಗೆಟುಕುವ ಹಾಗೆ ಒದಗಿಸಬೇಕು. ಈ ವಿಚಾರದಲ್ಲಿ ದೇಶದ ಜನತೆಗೆ ನಿಮ್ಹಾನ್ಸ್ ತರಹದ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗಿವೆ ಎಂದು ಸಚಿವರು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ನಿಮ್ಹ ನಿಮ್ಹಾನ್ಸ್ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ, ಡಾ.ಪ್ರಭಾ ಎಸ್ ಚಂದ್ರ, ಡಾ.ಕೆ. ಮುರಳೀಧರನ್ ಮತ್ತು ಡಾ.ಪ್ರಜ್ಞಾ ಧಾರ್ಗವೆ ಉಪಸ್ಥಿತರಿದ್ದರು.