ಕಳೆದ ಕೆಲ ದಿನಗಳಿಂದ ಸಾಕಷ್ಟು ಜನರನ್ನು ಬಲಿ ಪಡೆದಿರುವ ನಿಪಾ ವೈರಸ್ ಇಡೀ ದಕ್ಷಿಣ ಭಾರತವನ್ನೆ ತಲ್ಲಣಗೊಳಿಸಿದೆ. ಕೇರಳದಲ್ಲಿ ಇದುವರೆಗೂ ೧೦ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ ಮಹಾ ಮಾರಿ ನಿಪಾ ವೈರಸ್(NIPAH virus). ಹೀಗಾಗಿ ಕೇರಳದಲ್ಲಿ ಅಲ್ಲಿನ ಸರಕಾರ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಂಡು, ಹೈ ಅಲರ್ಟ್ ನ್ನು ಘೋಷಿಸಿದೆ. ಈ ಭಯಂಕರ ವೈರಸ್ ಹರಡುವುದನ್ನು ತಡೆಯಲು ಸರ್ಕಾರ ಗಂಭೀರ ಪ್ರಯತ್ನ ನಡೆಸುತ್ತಿದೆ. ಅತ್ಯಂತ ವೇಗವಾಗಿ ಹರಡುವ ಕಾಯಿಲೆ ಇದಾಗಿದ್ದು ಹೀಗಾಗಲೆ ಕೇಂದ್ರ ರೋಗ ನಿಯಂತ್ರಣ ತಂಡವೂ ಸಹ ಕೆರಳಕ್ಕೆ ಆಗಮಿಸಿದೆ.
ಚಿಕಿತ್ಸೆ ನೀಡುತ್ತಿದ್ದ ನರ್ಸ್ ಸಾವು
ನಿಪಾ ವೈರಸ್(NIPAH virus) ಹರಡಿ ಆಸ್ಪತ್ರೆ ಸೇರಿದವರಿಗೆ ಚಿಕಿತ್ಸೆ ನೀಡುತ್ತಿದ್ದ ನರ್ಸ್ ಒಬ್ಬರು ಬಾವಲಿ ಜ್ವರದಿಂದ ಸಾವನ್ನಪ್ಪಿದ್ದಾರೆ. ಪೇರಾಂಬ್ರ ತಾಲೂಕು ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಲೀನಾ ಮೃತಪಟ್ಟವರು. ಈ ರೋಗ ಬೇರೆಯವರಿಗೂ ಹರಡುವ ಸಾಧ್ಯತೆ ಇದೆ ಎಂದು ಸಂಬಂಧಿಕರಿಗೆ ಈಕೆಯ ಮೃತದೇಹ ಬಿಟ್ಟು ಕೊಡದೆ ಕೇರಳ ಸರ್ಕಾರವೇ ಈಕೆಯ ಅಂತ್ಯಸಂಸ್ಕಾರ ಮಾಡಿದೆ.
ಕರ್ನಾಟಕಕ್ಕೂ ಕಾಲಿಟ್ಟಿತಾ..?
ಕೇರಳದಲ್ಲಿ ಹಲವರನ್ನು ಬಲಿ ತೆಗೆದುಕೊಂಡಿರುವ ನಿಪಾ ವೈರಸ್ ರಾಜ್ಯಕ್ಕೂ ಆಗಮಿಸುವ ಶಂಕೆ ವ್ಯಕ್ತಪಡಿಸಲಾಗಿದೆ. ಕೇರಳಕ್ಕೆ ಹತ್ತಿರವಿರುವ ಮಂಗಳೂರಿನಲ್ಲಿ ಇಬ್ಬರಲ್ಲಿ ನಿಪಾ ವೈರಸ್ ಲಕ್ಷಣ ಕಂಡು ಬಂದಿದೆ ಎಂದು ಸಂಖೆ ವ್ಯಕ್ತಪಡಿಸಲಾಗಿತ್ತು. ಕೇರಳ ಮತ್ತು ಮಂಗಳೂರು ಮೂಲದ ಇಬ್ಬರಲ್ಲಿ ನಿಪಾ ವೈರಸ್ ಲಕ್ಷಣ ಕಾಣಿಸಿದ್ದು, ಇಬ್ಬರ ರಕ್ತವನ್ನು ಮಣಿಪಾಲದ ಕೆಎಂಸಿ ಸೆಂಟರ್’ಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆದರೆ ನಿಪಾ ವೈರಸ್ ಶಂಕಿತರಿಬ್ಬರ ತಪಾಸಣೆ ನಂತರ ನಿಪಾ ಜ್ವರದ ಲಕ್ಷಣಗಳು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸ್ಪಷ್ಟಪಡಿಸಿದ್ದಾರೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಗೆ ನಿಪಾ ಜ್ವರ ಬರುವ ಸಾಧ್ಯತೆ ಕಡಿಮೆ. ಪ್ರಾಣಿಗಳು, ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನ ತಿನ್ನಬೇಡಿ. ನಿಪಾ ಸೋಂಕು ಗಾಳಿಯಲ್ಲಿ ಹರಡುವುದಿಲ್ಲ. ಸೋಂಕಿತ ವ್ಯಕ್ತಿಗಳ ಸಂಪರ್ಕದಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಿದೆ ಎಚ್ಚರವಿರಲಿ. ನೆರವಿಗಾಗಿ 104 ಸಂಖ್ಯೆಗೆ ಕರೆ ಮಾಡಿ ಎಂದು ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.
ಅಲ್ಲದೆ ಸೋಂಕು ವ್ಯಾಪಿಸದಂತೆ ಎಚ್ಚರಿಕೆ ಕ್ರಮವಹಿಸಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಿಂದ ವರದಿ ತರಿಸಿಕೊಂಡಿರುವ ಜಿಲ್ಲಾ ಆರೋಗ್ಯ ಇಲಾಖೆ ಹೈ ಅಲರ್ಟ್ ಸೂಚನೆ ನೀಡಿದೆ. ಈ ನಡುವೆ ಮಂಗಳೂರಿನ ಆಸ್ಪತ್ರೆಗಳಿಗೆ ಕೇರಳ ಮೂಲದ ರೋಗಿಗಳೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಸೋಂಕು ಹರಡುವ ಆತಂಕ ಎದುರಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ರೋಗದ ಲಕ್ಷಣ ಕಂಡು ಬಂದರೆ ತಕ್ಷಣ ಕ್ರಮಕ್ಕಾಗಿ ವಾಟ್ಸಪ್ ಗ್ರೂಪ್ ಗಳನ್ನು ತೆರೆದಿದ್ದು, ಮುನ್ನಚ್ಚೆರಿಕಾ ಕ್ರಮವಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ವಾರ್ಡ್ ತೆರೆಯಲಾಗಿದೆ.
ರಾಜ್ಯದಲ್ಲೂ ಹೈಅಲರ್ಟ್ ಘೋಷಣೆ
ಇನ್ನು ಕೇರಳಕ್ಕೆ ಹೊಂದಿಕೊಂಡಿರುವ ಚಾಮರಾಜನಗರ, ಮೈಸೂರು, ಮಂಗಳೂರು, ಕೊಡಗು ಜಿಲ್ಲೆಗಳಿಗೂ ಈ ವೈರಾಣು ವ್ಯಾಪಿಸುವ ಸಾಧ್ಯಗಳಿವೆ. ಆದ್ದರಿಂದ ವೈರಾಣು ಸೊಂಕು ತಡೆಯಲು ಅಗತ್ಯ, ಸೂಕ್ತ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ನಾನು ಈಗಾಗಲೇ ಆದೇಶಿಸಿದ್ದೇನೆ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಕರ್ನಾಟಕದಲ್ಲೂ ನಿಪಾ ಭಯ ಕಾಡತೊಡಗಿದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಜ್ಯದಾದ್ಯಂತ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗೆ ಸುತ್ತೋಲೆ ರವಾನೆಯಾಗಿದೆ.
ಏನಿದು ನಿಪಾ ವೈರಸ್..?
1998ರಲ್ಲಿ ಮಲೇಷ್ಯಾದ ಕಾಂಪುಂಗ್ ಸುಂಗಾತ್ ನಿಪ್ಪಾ ವಲಯದಲ್ಲಿ ಕಾಣಿಸಿಕೊಂಡ ಮಾರಕ ಜ್ವರಕ್ಕೆ ಕಾರಣವಾದ ವೈರಸನ್ನು ನಿಪಾ ವೈರಸ್ ಎಂದು ಕರೆಯುತ್ತಾರೆ. ನಿಪಾ ವೈರಸ್ ಬಾವಲಿಗಳ ಮೂಲಕ ಹರಡುತ್ತದೆ. ಈ ಕ್ಷಣದವರೆಗೆ ಈ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ ನಿಪಾ ವೈರಸ್ ಮಾರಣಾಂತಿಕ ಎಂದೇ ಕುಖ್ಯಾತಿ ಪಡೆದಿದೆ. ಈ ವೈರಸ್ ಪತ್ತೆಯಾದರೆ ಶೇ.74ರಷ್ಟು ಸಾವು ಖಚಿತ ಎನ್ನಲಾಗಿದೆ. ಇದರ ತಡೆಗೆ ಲಸಿಕೆಯಿಲ್ಲ. ಆದರೆ ಆಸ್ಟ್ರೇಲಿಯಾದಲ್ಲಿ ಕುದುರೆಗಳಿಗೆ ಹೆಂಡ್ರಾ ಎಂಬ ವೈರಸ್ ಸೋಂಕು ತಗುಲಿದಾಗ ನೀಡುವ ಚಿಕಿತ್ಸೆಯನ್ನೇ ಈ ನಿಪಾ ವೈರಸ್ ಸೋಂಕು ತಗುಲಿದವರಿಗೂ ನೀಡುತ್ತಿದ್ದಾರೆ. ಬಾವಲಿಗಳು, ಹಂದಿಗಳು, ಕೋತಿ, ಬೆಕ್ಕು ಮುಂತಾದವುಗಳಿಂದ ಈ ವೈರಸ್ ಪಸರಿಸುತ್ತದೆ.
ವೈರಸ್ ಹೇಗೆ ಹರಡುತ್ತೆ..?
ಬಾವಲಿಗಳಿಂದ ಪ್ರಾಣಿಗಳಿಗೆ ಹರಡುತ್ತದೆ
ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುತ್ತದೆ
ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. (ಬಾವಲಿಗಳು ಕಚ್ಚಿದ ಹಣ್ಣನ್ನು ತಿನ್ನುವುದರಿಂದ ಹರಡುತ್ತದೆ)
ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ
ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ
ವೈರಸ್’ನ ಲಕ್ಷಣಗಳೇನು..?
ನಿಪಾ ಸೋಂಕು ಆವರಿಸಿದರೆ ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ, ಕೆಲವರಲ್ಲಿ ಅಪಸ್ಮಾರದ ಲಕ್ಷಣಗಳು ಕಾಣಿಸುತ್ತವೆ. ರೋಗದ ಲಕ್ಷಣಗಳು 3 ರಿಂದ 14 ದಿನಗಳವರೆಗೂ ಇರುತ್ತವೆ. ಮೊದಲಿಗೆ ಅದು ಮೆದುಳಿನ ಮೇಲೆ ತನ್ನ ದುಷ್ಪರಿಣಾಮ ಬೀರುತ್ತದೆ. ಆರಂಭಲ್ಲಿ ಮೆದುಳಿನ ನರಮಂಡಲದ ಮೇಲೆ ದಾಳಿ ಮಾಡುವ ವೈರಾಣು ಪತ್ತೆಯಾಗಲು 7 ರಿಂದ 14 ದಿನಗಳೇ ಬೇಕಾಗುತ್ತದೆ. ಸಾಮಾನ್ಯವಾದ ಜ್ವರ, ವಿಪರೀತ ತಲೆನೋವು, ಮಿದುಳಿನ ಉರಿಯೂತ, ಮಾಂಸಖಂಡಗಳ ನೋವು, ಅತಿಯಾದ ಆಯಾಸ, ಅತಿಯಾದ ನಿದ್ರಾಹೀನತೆ, ಉಸಿರಾಟದ ತೊಂದರೆ, ದಿಗ್ಭ್ರಮೆ ಮತ್ತು ಮಾನಸಿಕ ಗೊಂದಲ ಈ ಸೋಂಕಿನ ಲಕ್ಷಣಗಳಾಗಿವೆ. ಈ ಸೋಂಕು ಎಷ್ಟು ಮಾರಕ ಎಂದರೆ, ಕೇವಲ 24 ರಿಂದ 48 ಗಂಟೆಗಳಲ್ಲೇ ಸೋಂಕು ಪೀಡಿತ ವ್ಯಕ್ತಿ ಕೋಮಾಗೆ ಜಾರಿ ಸಾವನ್ನಪ್ಪುವ ಸಾಧ್ಯತೆಗಳಿವೆ.
ನಿಪಾ ವೈರಸ್ನಿಂದ ದೂರವಿರಲು ಏನೆಲ್ಲಾ ಮಾಡಬೇಕು?
ಬಾವಲಿಗಳ ಮೂಲಕ ಹರಡುವುದರಿಂದ ಯಾವುದೇ ಪ್ರಾಣಿಗಳು ಕಚ್ಚಿದ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಬೇಡಿ. ಬಾವಲಿಗಳು ವಾಸವಿರುವ ಪ್ರದೇಶಗಳಿಂದ ದೂರವಿರುವುದು ಉತ್ತಮವಾಗಿದೆ. ಬಾವಲಿ, ಹಂದಿಗಗಳು ಕಲುಷಿತವಾದ ನೀರನ್ನು ಸೇವಿಸುವುದರಿಂದ ದೂರವಿರಬೇಕು. ಹಂದಿಯ ಮಾಂಸದ ಸೇವನೆಯನ್ನು ಕೆಲದಿನಗಳು ತ್ಯಜಿಸುವುದು ಉತ್ತಮ. ನೆಗಡಿ, ಕೆಮ್ಮು, ಜ್ವರ ಬಂದ ತಕ್ಷಣ ವೈದ್ಯರನ್ನು ಭೆಟ್ಟಿಯಾಗಿ ಚಿಕಿತ್ಸೆಯನ್ನು ಪಡೆಯುವುದು ಉತ್ತಮ. ಮನೆಯಲ್ಲಿ ತಯಾರಿಸಿದ ಶುದ್ಧ ಆಹಾರ ಮತ್ತು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಆಹಾರ ಮತ್ತು ಕಷಾಯಗಳನ್ನು ಸೇವಿಸುವುದು ಉತ್ತಮ.
ಮಲೇಷ್ಯಾದಿಂದ ಬಂತು ವೈರಾಣು ತಡೆಗಟ್ಟುವ ಮಾತ್ರೆಗಳು
ಕೇರಳದಲ್ಲಿ 12 ಜನರ ಸಾವಿಗೆ ಕಾರಣವಾದ ನಿಪಾ ವೈರಾಣು ತಡೆಗಟ್ಟುವ ಮಾತ್ರೆಗಳು ಮಲೇಷ್ಯಾದಿಂದ ಕೇರಳವನ್ನು ತಲುಪಿದೆ. ರಿಬಾ ವೈರಿನ್ ಎಂಬ ಈ ಟ್ಯಾಬ್ಲೆಟ್ ಕೇರಳವನ್ನು ತಲುಪಿದೆ. ಮೊದಲ ಹಂತದಲ್ಲಿ ಬುಧವಾರ 2 ಸಾವಿರ ಟ್ಯಾಬ್ಲೆಟ್ ಕೇರಳದ ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿಗೆ ತಲುಪಿದೆ. ಮತ್ತೆ 8 ಸಾವಿರ ಟ್ಯಾಬ್ಲೆಟ್ ತಲುಪಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಬಂದಿರುವ ಟ್ಯಾಬ್ಲೆಟ್ ಗಳ ಪ್ರಾಯೋಗಿಕ ಪರೀಕ್ಷೆ ಮಾಡಿದ ಬಳಿಕವಷ್ಟೇ ರೋಗಿಗಳಿಗೆ ನೀಡಲು ನಿರ್ಧರಿಸಲಾಗಿದೆ.
ಆದರೆ ಈ ಮಾತ್ರೆಯಿಂದ ಓವರ್ ಡೋಸ್ ಆದರೆ ರೋಗಿಗೆ ತೀರಾ ಅಪಾಯಕಾರಿ ಎಂದು ವೈದ್ಯರು ಮುನ್ನೆಚ್ಚರಿಕೆ ಸಹ ನೀಡಿದ್ದಾರೆ. ಟ್ಯಾಬ್ಲೆಟ್ ಕೈಗೆ ಸಿಕ್ತು ಅಂತಾ ಈ ಟ್ಯಾಬ್ಲೆಟನ್ನು ಬೇಕಾಬಿಟ್ಟಿ ಸೇವಿಸುವಂತಿಲ್ಲ. ಕಾರಣ ಇದು ಓವರ್ ಡೋಸ್ ಆದ್ರೆ ಕಿಡ್ನಿಗಳು ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ತಜ್ಞ ವೈದ್ಯರು ಮುನ್ನೆಚ್ಚರಿಕೆ ನೀಡಿದ್ದಾರೆ.
Nipah fear is now a social problem: here is how it spread and details about Nipah Virus Including Symptoms And Checks