Mysuru Dasara : ದಸರಾ ಎಂದರೇ ನೆನಪಾಗುವುದೇ ನಮ್ಮ ಮೈಸೂರು ದಸರಾ. ಇಡೀ ಜಗತ್ತೇ ಮೈಸೂರಿನ ದಸರಾವನ್ನು ಎದುರು ನೋಡುತ್ತಿರುತ್ತದೆ ಎಂದರೇ ತಪ್ಪಾಗಲಾರದು. ನವರಾತ್ರಿಯನ್ನು ಭಾರತದಾದ್ಯಂತ ಸಂಭ್ರಮದಿಂದ ಆಚರಿಸಿದರೂ ನವರಾತ್ರಿ ಸಮಯದಲ್ಲಿ ಮೈಸೂರಿನಲ್ಲಿ ನಡೆಯುವ ದಸರಾ ವೈಭವವೇ ಬೇರೆಯಾಗಿರುತ್ತದೆ. ಸಾಮಾನ್ಯವಾಗಿ ಮೈಸೂರು ದಸರಾವನ್ನು ಹತ್ತು ದಿನಗಳ ಕಾಲ ಸುದೀರ್ಘ ಹಬ್ಬವಾಗಿ ಆಚರಿಸುತ್ತಾರೆ ಕರ್ನಾಟಕ, ಭಾರತ ಮಾತ್ರವಲ್ಲದೇ ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ವಿದೇಶಿಗರೂ ಮೈಸೂರಿಗೆ ಆಗಮಿಸುತ್ತಾರೆ.
ಮಹಿಷಪುರ ಅಂತ ಇದ್ದಿದ್ದು ಮೈಸೂರು ಅಂತ ಹೇಗೆ ಬದಲಾಯಿತು
ಮೈಸೂರು ಎಂಬುದು “ಮಹಿಷಾಸುರ” ಎಂಬ ಅಸುರನ ಹೆಸರಿನಿಂದ ಮೂಲವಾಗಿ ಬಂದಿದೆ. ಇದನ್ನು ಹಿಂದೆ “ಮಹಿಷಪುರ ಅಥವ ಮಹಿಷಾಸುರನ ಊರು” ಎಂದೂ ಕರೆಯಲಾಗುತ್ತಿತ್ತು. ದೇವೀ ಭಾಗವತದಲ್ಲಿ ಬರುವ ಪೌರಾಣಿಕ ಕಥನಕ್ಕೆ ಮೈಸೂರು ಸಂಬಂಧ ಹೊಂದಿದೆ. ದೇವಿ ಪುರಾಣದಲ್ಲಿ ಇರುವ ಕಥೆಯ ಪ್ರಕಾರ, ಅಸುರರ ದೊರೆ, ಕೋಣನ ತಲೆಯುಳ್ಳ “ಮಹಿಷಾಸುರ” ಎಂಬಾತನು ಮೈಸೂರು ಪಟ್ಟಣವನ್ನು ಆಳುತ್ತಿದ್ದನು. “ಮಹಿಷಾಸುರ” ಉಪಟಳ ತಾಳಲಾರದೆ ದೇವಾನುದೇವತೆಗಳು ತಮ್ಮನ್ನು ರಕ್ಷಿಸುವಂತೆ ಪಾರ್ವತೀ ದೇವಿಯ ಮೊರೆ ಹೋದರು. ಆಗ ಪಾರ್ವತಿದೇವಿ ಚಾಮುಂಡಿಯ ಅವತಾರ ಎತ್ತಿ ಮಹಿಷಾಸುರನನ್ನು ಸಂಹರಿಸಿ ಮೈಸೂರಿನಲ್ಲಿ ನೆಲೆಸಿದಳು ಹೀಗಾಗಿ ಕಾಲನಂತರದಲ್ಲಿ ಮಹಿಷರಪುರ ಮೈಸೂರು ಎಂದು ಅವತಾರಣಿಕೆಯಾಯಿತು. ಚಾಮುಂಡೇಶ್ವರಿಯು ಮಹಿಷಾಸುರನನ್ನು ವಧಿಸಿದ ಸತ್ಕಾರ್ಯದ ಸ್ಮರಣಾರ್ಥವಾಗಿ, ದುಷ್ಟ ಶಕ್ತಿಯ ಮೇಲೆ ಶಿಷ್ಟ ಶಕ್ತಿಯ ವಿಜಯದ ಸಂಕೇತವಾಗಿ ಪ್ರತಿವರ್ಷ 10 ದಿನಗಳ ಪ್ರಖ್ಯಾತ ದಸರಾ ಉತ್ಸವವನ್ನು ಮೈಸೂರಿನಲ್ಲಿ ಆಚರಿಸಲಾಗುತ್ತದೆ.
ಒಂದು ಕಾಲಘಟ್ಟದಲ್ಲಿ ಆಳರಸರ ಮಹೋತ್ಸವವಾಗಿ ಆಚರಿಸಲಾಗುತ್ತಿದ್ದ ದಸರಾ ಮಹೋತ್ಸವಕ್ಕೆ ನಾಲ್ಕು ಶತಮಾನಕ್ಕಿಂತಲೂ ಹೆಚ್ಚಿನ ಇತಿಹಾಸವಿದೆ. ಭಾರತೀಯ ಸಂಸ್ಕೃತಿಯ ಚರಿತ್ರೆಯಲ್ಲೇ ಇಷ್ಟೊಂದು ಕಾಲ ನಡೆದು ಬಂದಿರುವ ಮತ್ತೊಂದು ಹಬ್ಬ ಕಾಣಸಿಗುವುದು ಬಹಳ ಅಪರೂಪ. ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಯ ಆರಾಧನೆಯೊಂದಿಗೆ ಆರಂಭವಾಗುವ ನವರಾತ್ರಿ ಹಾಗೂ ಹತ್ತನೇ ದಿನದಂದು ನಡೆಯುವ ವೈಭವದ ವಿಜಯ ದಶಮಿಯ ಮೈಸೂರು ದಸರಾ ಮಹೋತ್ಸವಕ್ಕೆ ಅದರದೇ ಆದ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕ್ರತಿಕ ಹಿನ್ನೆಲೆ ಇದೆ.
ಮೈಸೂರು ದಸರಾ ನಡೆದು ಬಂದ ಹಾದಿ :-
– ಕರ್ನಾಟಕ ಇತಿಹಾಸದಲ್ಲಿ ಸುವರ್ಣಯುಗವನ್ನು ಸೃಷ್ಟಿಸಿ ವಿಜಯ ನಗರ ಸಾಮ್ರಾಜ್ಯವನ್ನು ಕಟ್ಟಿ ವೈಭವದಿಂದ ಮೆರೆದವರು ವಿಜಯನಗರ ಅರಸರು. ಇವರ ಕಾಲದಿಂದ ಆರಂಭಗೊಂಡು ಆಚರಿಸಲ್ಪಡುತ್ತಿದ್ದ ನವರಾತ್ರಿ ಉತ್ಸವದ ವಿಜಯ ದಶಮಿಯ ದಸರಾ ಹಬ್ಬಕ್ಕೆ ಹೆಚ್ಚಿನ ಕಳೆ ತಂದುಕೊಟ್ಟವರು ವಿಜಯನಗರ ಅರಸರಲ್ಲೇ ಅತ್ಯಂತ ಪ್ರಖ್ಯಾತರಾಗಿದ್ದ ಶ್ರೀಕೃಷ್ಣದೇವರಾಯ. ಆ ಕಾಲದಲ್ಲಿ ಹಂಪೆಯಲ್ಲಿರುವ ಮಹಾನವಮಿ ದಿಬ್ಬ ಮತ್ತು ವಿಜಯ ವಿಠಲ ದೇವಾಲಯಗಳು ದಸರಾ ಮಹೋತ್ಸವದ ಕೇಂದ್ರಗಳಾಗಿದ್ದವು.
– ವಿಜಯನಗರ ಸಾಮ್ರಾಜ್ಯದ ಶಕ್ತಿ ಸಾಮಥ್ರ್ಯ, ಸಂಪತ್ತು, ವೈಭವ- ವೈಭೋಗ, ವೀರತ್ವ-ಧೀರತ್ವ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಸಂಸ್ಕೃತಿ, ಶ್ರೀಮಂತಿಕೆಯನ್ನು ತೋರ್ಪಡಿಸಿಕೊಳ್ಳುವ ಹಿನ್ನಲೆಯಲ್ಲಿ ಬಹು ಮುಖ್ಯವಾಗಿ ವಿಜಯದ ದ್ಯೋತಕವಾಗಿ ವಿಜಯದಶಮಿಯ ದಸರಾ ಮಹೋತ್ಸವವನ್ನು ವಿಜಯ ನಗರ ಅರಸರು ಆಚರಿಸುತ್ತಿದ್ದರು.
– ಈ ಸಂಭ್ರಮದ ಉತ್ಸವವನ್ನು ವೀಕ್ಷಿಸಲು ದೇಶ- ವಿದೇಶಗಳ ಗಣ್ಯರು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ ಉಲ್ಲೇಖಗಳಿವೆ. 11ನೇ ಶತಮಾನದಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ವಿದೇಶೀ ಪ್ರವಾಸಿಗರಾದ ಅಲ್ಬೆರೋನಿ, 15-16ನೇ ಶತಮಾನದಲ್ಲಿ ಬಂದಿದ್ದ ಪರ್ಷಿಯಾದ ಅಬ್ದುಲ್ ರಜಾಕ್, ಇಟಲಿಯ ನಿಕೋಲಕೊಂಟಿ, ಪೋರ್ಚುಗೀಸಿನ ಡೊಮಿಂಗೋಪಾಯಸ್ ಮೊದಲಾದವರು ವಿಜಯನಗರ ಸಾಮ್ರಾಜ್ಯದ ವೈಭವೋಪೇತವಾದ ಈ ಮಹೋತ್ಸವವನ್ನು ಕೊಂಡಾಡಿ, ತಮ್ಮ ಪ್ರವಾಸ ಕಥನಗಳಲ್ಲಿ ದಾಖಲಿಸಿದ್ದಾರೆ.
– ವಿಜಯದಶಮಿ ದಸರಾ ಮಹೋತ್ಸವವನ್ನು ವಿಜಯನಗರ ಸಾಮ್ರಾಜ್ಯ ಪತನದ ನಂತರ ಮುಂದುವರಿಸಿಕೊಂಡು ಬಂದವರು ಯದು ವಂಶದ ಮೈಸೂರು ಒಡೆಯರು. ಯದುವಂಶದ ಆಳ್ವಿಕೆಯ 9ನೇ ಅರಸರಾದ ರಾಜ ಒಡೆಯರು(1578-1617) ತಮ್ಮ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ 1610ರಲ್ಲಿ ವಿಜಯನಗರದ ರಾಜಪರಂಪರೆಯಂತೆ ನವರಾತ್ರಿ ಉತ್ಸವದಂದು ದಸರಾ ಮಹೋತ್ಸವವನ್ನು ಆರಂಭಿಸಿದರು.
– ವಿಜಯನಗರ ಅರಸರ ಸಂಪ್ರದಾಯದಂತೆ ದಸರಾಗೆ ಸಂಬಂಧಿಸಿದ ಎಲ್ಲಾ ರೀತಿಯ ಶಾಸ್ತ್ರ ಹಾಗೂ ವಿಧಿ ವಿಧಾನಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಯದುವಂಶಸ್ಥರೂ ಅನುಸರಿಕೊಂಡು ಬಂದರು. ಈ ಪ್ರಕಾರದಂತೆ ಅಶ್ವಯುಜ ಶುದ್ಧ ಪ್ರಥಮೆಯಂದು ನವರಾತ್ರಿ ಉತ್ಸವ ಆರಂಭವಾಗಿ ಮಹಾನವಮಿಯ ಕಡೇ ದಿನದವರೆಗೂ ಪ್ರತಿನಿತ್ಯ ಪೂಜೆ ಪುರಸ್ಕಾರ, ಪೂರ್ವಾಹ್ನ ಮತ್ತು ಮಧ್ಯಾಹ್ನ ಸಿಂಹಾಸನಾರೋಹಣ, ಒಡ್ಡೋಲಗ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಬೇಕೆಂದು ವಿಧೇಕವನ್ನೇ ಮಾಡಿ ದಸರಾ ಹಬ್ಬವನ್ನು ಆಚರಣೆಗೆ ತಂದರು. 1799ರವೆರೆಗೂ ಅಂದಿನ ಮೈಸೂರು ರಾಜ್ಯದ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲೇ ದಸರಾ ನಡೆಯುತ್ತಿತ್ತು.
– ಹೈದರಾಲಿ ಮತ್ತು ಟಿಪ್ಪುವಿನ ಆಳ್ವಿಕೆಯ ನಂತರ ಮತ್ತೆ ಅಧಿಕಾರಕ್ಕೆ ಬಂದ ಯದುಕುಲತಿಲಕ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ(1799-1868)ಕಾಲದಲ್ಲಿ ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗವಾಯಿತು. ಅಲ್ಲಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಅತೀವ ಕಾಳಜಿಯಿಂದ ಮತ್ತಷ್ಟು ವಿಜೃಂಭಣೆಯಿಂದ 1800ರಲ್ಲಿ ಮೈಸೂರಿನಲ್ಲಿ ದಸರಾ ಪ್ರಾರಂಭವಾಗಿ ”ಮೈಸೂರು ದಸರಾ” ಎಂದು ವಿಶ್ವವಿಖ್ಯಾತಿಯನ್ನು ಪಡೆಯಿತು.
ಪುರಾಣಗಳಲ್ಲಿ ದಸರಾ :-
ದೇಶದ ಹಲವು ಭಾಗಗಳಲ್ಲಿ ಜನರ ಸಂಸ್ಕøತಿ ಹಾಗು ಸಂಪ್ರದಾಯಗಳಿಗೆ ಅನುಗುಣವಾಗಿ ಹಬ್ಬಕ್ಕೆ ಸಂಬಂಧಿತ ಹಲವಾರು ಕತೆಗಳಿವೆ. ಶ್ರೀ ರಾಮನು ರಾವಣಾಸುರನನ್ನು ಸಂಹಾರ ಮಾಡಿದ ದಸರಾ ದಿನದಂದು (ಹಿಂದೂ ಪಂಚಾಂಗದ ಪ್ರಕಾರ ಅಶ್ವಯುಜ ತಿಂಗಳ ಹತ್ತನೆಯ ದಿನದಂದು) ಹಬ್ಬವನ್ನು ಜನರು ಆಚರಿಸುತ್ತಾರೆ. ಸೀತಾ ಮಾತೆಯನ್ನು ಅಪಹರಿಸಿದ್ದಕ್ಕಾಗಿ ಹಾಗು ಅವರನ್ನು ಕಳುಹಿಸದಿದಕ್ಕಾಗಿ ಶ್ರೀ ರಾಮನು ರಾವಣನ ಸಂಹಾರ ಮಾಡುತ್ತಾನೆ. ಶ್ರೀ ರಾಮನು ಆತನ ಸಹೋದರ ಲಕ್ಷ್ಮಣ ಹಾಗು ವಾನರ ಸೈನ್ಯದ ಭಟ ಹನುಮಂತನ ಸಹಾಯದಿಂದ ರಾವಣನ ವಿರುದ್ಧ ಯುದ್ಧದಲ್ಲಿ ಜಯ ಸಾಧಿಸುತ್ತಾನೆ. ಹಿಂದೂ ಧರ್ಮಗ್ರಂಥ ರಾಮಾಯಣದ ಪ್ರಕಾರ ಶ್ರೀ ರಾಮನು ದುರ್ಗಾ ಮಾತೆಯ ಆಶೀರ್ವಾದ ಪಡೆಯಲು ಚಂಡಿ ಹೋಮವನ್ನು ಮಾಡಿದನು ಎಂಬ ಉಲ್ಲೇಖವಿದೆ. ರಾವಣಾಸುರನನ್ನು ಯುದ್ಧದ ಹತ್ತನೆಯ ದಿನ ಸಂಹರಿಸುವ ರಹಸ್ಯ ಶ್ರೀ ರಾಮನಿಗೆ ಮೊದಲೇ ತಿಳಿದಿದ್ದರಿಂದ ಯುದ್ಧದಲ್ಲಿ ಜಯ ಸಾಧಿಸುವುದು ಸುಲಭವಾಯಿತು. ಇನ್ನೊಬ್ಬ ಅಸುರನಾದ ಮಹಿಷಾರನನ್ನು ಇದೇ ಹತ್ತನೆಯ ದಿನದಂದು ದುರ್ಗಾ ಮಾತೆಯು ಸಂಹರಿಸಿದ್ದರಿಂದ ದಸರಾ ಹಬ್ಬಕ್ಕೆ ದುರ್ಗೊತ್ಸವ ಎಂದೂ ಸಹ ಕರೆಯಲಾಗುತ್ತದೆ.
ಮೈಸೂರು ದಸರಾ ಹೇಗಿರುತ್ತೆ ಗೊತ್ತೇ?
ಈ ಹತ್ತು ದಿನಗಳನ್ನು ಮೈಸೂರಿನಲ್ಲಿ ವಿಶೇಷ ರೀತಿಯಿಂದ ಆಚರಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ಮೈಸೂರಿನ ಅರಮನೆ ದೀಪಾಲಂಕಾರದಿಂದ ಕಂಗೊಳಿಸುತ್ತದೆ. ಮೈಸೂರನ್ನು ಆಳಿದ ರಾಜ ಮನೆತನವಾದ ಒಡೆಯರ ಕುಲ ದೇವತೆಯಾದ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಗುತ್ತದೆ. ವಿಜಯದಶಮಿಯಂದು ಯುದ್ಧಕ್ಕಾಗಿ ಬಳಸುವ ಎಲ್ಲಾ ಆಯುಧ, ಪರಿಕರಗಳನ್ನು ಪೂಜಿಸಿ ಮೆರವಣಿಗೆಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ಒಯ್ಯುವುದು ಮೈಸೂರಿನ ವಿಶೇಷತೆ. ಕ್ರಿ.ಶ. 1640ರಲ್ಲಿ ಶ್ರೀರಂಗಪಟ್ಟಣದಲ್ಲಿ ರಾಜ ಒಡೆಯರ್ ಅವರಿಂದ ಆರಂಭವಾಗಿ, ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ. ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಿಂದಲೂ ಜನರು ಜಂಬೂಸವಾರಿ ವೀಕ್ಷಣೆಗಾಗಿ ಆಗಮಿಸುತ್ತಾರೆ. ಬೊಂಬೆ ಹಬ್ಬ: ಮೈಸೂರು ಪ್ರಾಂತದಲ್ಲಿ ರಾಜಾ ಪ್ರತ್ಯಕ್ಷ ದೇವತಾ ಎಂಬ ಮಾತಿದ್ದು, ರಾಜ ರಾಣಿಯನ್ನು ದೇವರೆಂದೇ ಭಾವಿಸುವ ಕಾರಣ, ನವರಾತ್ರಿಯ ಕಾಲದಲ್ಲಿ ಪಟ್ಟದ ಬೊಂಬೆಗಳನ್ನು ಅಂದರೆ ರಾಜ ರಾಣಿಯರ ಬೊಂಬೆಯನ್ನು ಮನೆಯಲ್ಲಿ ಕೂರಿಸಿ ಪೂಜಿಸುವುದು ವಾಡಿಕೆ. ಈ ರಾಜಾ ರಾಣಿ ಬೊಂಬೆಗಳ ಜೊತೆಗೆ ಹಲವು ಬಗೆಯ ಬೊಂಬೆಗಳನ್ನು ಹಂತ ಹಂತವಾಗಿ ಅಲಂಕರಿಸಲಾದ ಜಗತಿಗಳ ಮೇಲೆ ಕೂರಿಸಿ, ಪ್ರತಿ ಸಂಜೆ ಆರತಿ ಮಾಡಿ ಬೊಂಬೆ ಬಾಗಿನ ನೀಡುವುದೂ ಸಂಪ್ರದಾಯಗಳಲ್ಲೊಂದು. ಹೀಗೆ ಬೊಂಬೆಗಳನ್ನು ಕೂರಿಸುವಾಗ ಶ್ರೀರಾಮ, ಲಕ್ಷ್ಮಣ, ಸೀತಾ ಮಾತೆ ಹಾಗೂ ಹನುಮನ ಬೊಂಬೆಗಳನ್ನೂ ಇಡುತ್ತಾರೆ. ಶ್ರೀರಾಮ ಈ ಅವಧಿಯಲ್ಲೇ ರಾವಣನನ್ನು ಸಂಹರಿಸಿದ್ದು ಎನ್ನುವ ಕಾರಣದಿಂದ ರಾಮನ ಬೊಂಬೆಗಳನ್ನೂ ಇಡುತ್ತಾರೆ. ಕೆಲವರ ಮನೆಗಳಲ್ಲಿ ದಶಾವತಾರದ ಬೊಂಬೆಗಳನ್ನೂ ಕೂರಿಸುತ್ತಾರೆ. ಹೆಣ್ಣು ಮಕ್ಕಳಿರುವ ಮನೆಯಲ್ಲಂತೂ ದಸರೆ ಬೊಂಬೆಹಬ್ಬ ಎಂದೇ ಖ್ಯಾತಿ ಪಡೆದಿದೆ. ಸಂಜೆ ಕೋಲಾಟವೂ ಈ ಹಬ್ಬದ ವಿಶೇಷಗಳಲ್ಲೊಂದು. ಸರಸ್ವತಿ ಹಬ್ಬದ ದಿನ ಬೊಂಬೆಗಳ ಜೊತೆಗೆ ಶಾರದೆಯ ಬೊಂಬೆಯನ್ನೂ ಕೂರಿಸಿ, ಕಳಶ ಇಟ್ಟು ಸೀರೆ ಉಡಿಸಿ ವಿಶೇಷವಾಗಿ ಪೂಜಿಸಲಾಗುತ್ತದೆ. ಅಂದು ಪುಸ್ತಕ, ಪೆನ್ಸಿಲ್, ರಬ್ಬರ್, ಪೆನ್ಗಳಿಗೂ ಪೂಜೆ ನಡೆಯುತ್ತದೆ. ಮೈಸೂರು ಭಾಗದಲ್ಲಿ ಸಾಮಾನ್ಯವಾಗಿ ನವರಾತ್ರಿಯಲ್ಲಿ ಪಾಡ್ಯದ ದಿನವೇ ಬೊಂಬೆಗಳ ಕೂರಿಸಿ ಪೂಜಿಸಲಾಗುತ್ತದೆ. ಹೆಣ್ಣು ಮಕ್ಕಳಿಲ್ಲದ ಕೆಲವರು ಶಾರದೆಯ ಹಬ್ಬದಿಂದ ತಮ್ಮ ಮನೆಗಳಲ್ಲಿ ಬೊಂಬೆ ಕೂರಿಸುತ್ತಾರೆ.
ಯುವಜನತೆಯಲ್ಲಿ ಸ್ವತಂತ್ರದ ಕಿಚ್ಚುಹಚ್ಚಿ ಬಡಿದೆಬ್ಬಿಸಿದ ಸುಭಾಷ್ಚಂದ್ರಬೋಸ್ ರ ಕಿವಿಮಾತುಗಳಿವು..