ಶಿಕ್ಷಣದ ಜೊತೆಗೆ ಸಂಸ್ಕಾರ, ಮೌಲ್ಯಗಳನ್ನು ಮಕ್ಕಳಿಗೆ ಕಲಿಸಿಬೇಕು:
ಬೆಂಗಳೂರು: ಸೆಪ್ಟಂಬರ್ 5, 2022.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳು, ಮೌಲ್ಯಗಳನ್ನು ಕಲಿಸಿಕೊಡುವ ಅಗತ್ಯತೆ ಇದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ತಿಳಿಸಿದರು.
ಬಿಬಿಎಂಪಿಯ ಶಿಕ್ಷಣ ಇಲಾಖೆಯಿಂದ ಬೆಂಗಳೂರಿನ ಪುರಭವನದಲ್ಲಿ ಸೋಮವಾರ (ಸೆ.5) ಆಯೋಜಿಸಲಾಗಿದ್ದ ‘ಶಿಕ್ಷಕರ ದಿನಾಚರಣೆ, ಪ್ರತಿಭಾ ಪುರಸ್ಕಾರ, ಉತ್ತಮ ಶಿಕ್ಷಕರಿಗೆ ಸನ್ಮಾನ’ ಹಾಗೂ ‘ವಿದ್ಯಾರ್ಥಿ ಬೆಳಕು ಯೋಜನೆ’ಯನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
‘ಕಳೆದ ಎರಡ್ಮೂರು ದಶಕಗಳ ಹಿಂದೆ ಶಾಲೆ ಮತ್ತು ಗ್ರಂಥಾಲಯಗಳಲ್ಲಿ ಮಾತ್ರ ಸಿಗುತ್ತಿದ್ದ ಪುಸ್ತಕಗಳು, ಮಾಹಿತಿಗಳು ಇಂದು ಬೆರಳ ತುದಿಯಲ್ಲಿ ಸಿಗುತ್ತಿವೆ. ಹೀಗಾಗಿ, ಮಕ್ಕಳು ಶಾಲೆ, ಕಾಲೇಜಿಗೆ ಕೇವಲ ಪಠ್ಯದ ಜ್ಞಾನಕ್ಕಾಗಿ ಬರಬೇಕಾಗಿಲ್ಲ. ಮಕ್ಕಳಿಗೆ ಮೌಲ್ಯ, ಸಂಸ್ಕಾರ ನೀಡುವ, ಶಿಕ್ಷಣ ನೀಡಬೇಕಿದೆ. ಮಕ್ಕಳಲ್ಲಿನ ಕೊರತೆಗಳನ್ನು ಪತ್ತೆ ಹಚ್ಚಿ ಅದನ್ನು ಸರಿದೂಗಿಸಿ ಉತ್ತಮ ಪ್ರಜೆಯಾಗಿಸುವ ಶಿಕ್ಷಣವನ್ನು ನೀಡಬೇಕಿದೆ’ ಎಂದು ಶಿಕ್ಷಕರಿಗೆ ಸಚಿವರು ಕಿವಿಮಾತು ಹೇಳಿದರು.
‘ರಾಷ್ಟ್ರಪತಿಗಳಾಗಿ, ಉಪರಾಷ್ಟ್ರಪತಿಗಳಾಗಿ, ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿ, ಶಿಕ್ಷಕರಾಗಿ, ಉಪನ್ಯಾಸಕರಾಗಿ, ಮಾರ್ಗದರ್ಶಕರಾಗಿ ಡಾ.ಎಸ್. ರಾಧಾಕೃಷ್ಣನ್ ಅವರು ಮಾದರಿ ಜೀವನವನ್ನು ನಡೆಸಿದರು. ತಮಗೆ ನೀಡಲಾದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರು. ವಿದ್ಯಾರ್ಥಿಗಳು ಹಾಗೂ ಸಮಾಜ ಅವರಿಂದ ಪ್ರೇರಿತಗೊಂಡಿತ್ತು. ತನ್ನ ಹುಟ್ಟು ಹಬ್ಬ ಆಚರಿಸುವ ಬದಲು ಶಿಕ್ಷಕರಿಗೆ ಗೌರವ ಸಲ್ಲಿಸಲು, ಕೃತಜ್ಞತೆ ಅರ್ಪಿಸಲು ಶಿಕ್ಷಕರ ದಿನಾಚರಣೆ ಆಚರಿಸಿ ಎಂದು ಕರೆ ನೀಡಿದ ಶ್ರೇಷ್ಠ ವ್ಯಕ್ತಿತ್ವ ರಾಧಾಕೃಷ್ಣನ್ ಅವರದ್ದಾಗಿತ್ತು. ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು’ ಎಂದು ಸಚಿವ ನಾಗೇಶ್ ಹೇಳಿದರು.
‘ದಶಕಗಳ ಹಿಂದೆ ತಾಯಿಯೇ ಮೊದಲ ಗುರುವಾಗಿ, ಮಕ್ಕಳಿಗೆ ಮನೆಯಲ್ಲೇ ಉತ್ತಮ ಗುಣ, ರೂಢಿಗಳು, ಸಂಸ್ಕಾರ ಹೇಳಿಕೊಡಲಾಗುತ್ತಿತ್ತು. ಮಠ, ಮಂದಿರಗಳು ಗುಣ, ಸಂಸ್ಕಾರಗಳನ್ನು ನೀಡುತ್ತಿದ್ದವು. ಮಕ್ಕಳು ಲೋಪ-ದೋಷಗಳು, ತಪ್ಪುಗಳನ್ನು ತಿದ್ದುವ ವ್ಯವಸ್ಥೆ ಇತ್ತು. ಆದರೆ, ಇಂದು ನಮ್ಮ ಮಕ್ಕಳನ್ನು, ನಾವೇ ತಿದ್ದಲು ಯೋಚಿಸುವಂತಹ ಮನಸ್ಥಿತಿ ಎದುರಾಗಿದೆ. ಮೊಬೈಲ್ ಫೋನ್¬ಗಳಲ್ಲಿ ಎಲ್ಲರೂ ಬ್ಯುಸಿಯಾಗಿರುತ್ತಾರೆ. ಅದರಿಂದ ಎಷ್ಟು ಜನ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಸಚಿವರು ನುಡಿದರು.
‘ಉತ್ತಮ ಚಾರಿತ್ರ್ಯ, ಗುಣಗಳನ್ನು ಎಲ್ಲರೂ ಹೊಂದಬೇಕು. ರಾಷ್ಟ್ರಭಕ್ತಿ, ಸಮರ್ಪಣೆ ಮನೋಭಾವವನ್ನು ಹೊಂದಬೇಕು. ದೇಶದ ಸಮಗ್ರ ಅಭಿವೃದ್ಧಿಗೆ ಸಂಘಟಿತರಾಗಿ ಸಾಗಬೇಕು. ಕೋವಿಡ್ ಮಹಾಮಾರಿ ಸೇರಿದಂತೆ ಹಲವು ಸಂಕಷ್ಟದ ಸಂದರ್ಭಗಳನ್ನು ಭಾರತ ಸಮರ್ಥವಾಗಿ ಎದುರಿಸಿದೆ. ಭಾರತವು ಅಭಿವೃದ್ಧಿಶೀಲ ರಾಷ್ಟ್ರವಾಗಿ ವಿಶ್ವಗುರುವಾಗಲು ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕು’ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಶಿಕ್ಷಣ ವಿಭಾಗದ ವಿಶೇಷ ಆಯುಕ್ತರಾದ ಡಾ. ರಾಮ್ ಪ್ರಸಾತ್ ಮನೋಹರ್, ಸಹಾಯಕ ಆಯುಕ್ತರಾದ ಉಮೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ಬೆಳಕು ಯೋಜನೆಯಿಂದ ಅನುಕೂಲ:
ಬೆಂಗಳೂರು ನಗರ ವ್ಯಾಪ್ತಿಯ ಬಿಬಿಎಂಪಿ ಶಾಲೆಗಳ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಬಿಬಿಎಂಪಿಯ ಆರಂಭಿಸಿರುವ ‘ವಿದ್ಯಾರ್ಥಿ ಬೆಳಕು’ ಯೋಜನೆ ವಿಶಿಷ್ಟವಾಗಿದೆ. ಓದಿನಲ್ಲಿ ಹಿಂದುಳಿದ ಮಕ್ಕಳಿಗೆ ಅನುಕೂಲವಾಗಲಿದೆ. ನಗರದ ಶಾಲೆಗಳ ಪರೀಕ್ಷೆ ಫಲಿತಾಂಶಗಳಲ್ಲಿ ಸುಧಾರಣೆಯಾಗುವ ವಿಶ್ವಾಸವಿದೆ’ ಎಂದು ಸಚಿವರು ನುಡಿದರು.