Home » ಬಿಟ್‌ಕಾಯಿನ್‌ ಕರೆನ್ಸಿ ಎಂದರೇನು? ಬಿಟ್‌ಕಾಯಿನ್‌ ಖರೀದಿ ಹೇಗೆ?

ಬಿಟ್‌ಕಾಯಿನ್‌ ಕರೆನ್ಸಿ ಎಂದರೇನು? ಬಿಟ್‌ಕಾಯಿನ್‌ ಖರೀದಿ ಹೇಗೆ?

by manager manager

ಬಿಟ್ಕಾಯಿನ್ ಸದ್ಯ ಕಣ್ಣಿಗೆ ಕಾಣದೆ ಸದ್ದು ಮಾಡುತ್ತಿರೊ ಡಿಜಿಟಲ್ ಕರೆನ್ಸಿ. 2009 ರಲ್ಲಿ ರೂಪಗೊಂಡ ಈ ಬಿಟ್ಕಾಯಿನ್ ಎಲ್ಲರ ಮನೆ ಮಾತಾಗಿದ್ದು 2021ರಲ್ಲಿ. ಹಾಗಾದ್ರೆ ಈ ಬಿಟ್ಕಾಯಿನ್ ಅಂದ್ರೆ ಏನು?. ಇದು ಎಲ್ಲಿ ಸಿಗುತ್ತೆ?. ಅದುನ್ನ ಖರೀದಿಸೋದು ಹೇಗೆ?. ಖರೀದಿಸಿದ ಬಳಿಕ ಅದುನ್ನ ಬಳಸೋದಾದ್ರು ಹೇಗೆ? ಮತ್ತು ಎಲ್ಲಿ? ಅನ್ನೊ ಪ್ರಶ್ನೆ ನಿಮ್ಮಲ್ಲಿ ಇದ್ರೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಬಿಟ್ಕಾಯಿನ್ ಅಂದ್ರೆ ಏನು?
ಬಿಟ್ಕಾಯಿನ್. ಕ್ರಿಪ್ಟೋಕರೆನ್ಸಿಯ ಒಂದು ಭಾಗವಾದ ಇದು, ಡಿಜಿಟಲ್ ರೂಪದ ನಗದು. ಕಣ್ಣಿಗೆ ಕಾಣದ ಮತ್ತು ಮುಟ್ಟಲು ಸಿಗದ ನಾಣ್ಯ. ಹಾಗಾಗಿ ಇದು ಒಂದು ರೀತಿಯ ಮಾಯಾ ಕರೆನ್ಸಿ ಅಂತಲೇ ಹೇಳಬಹುದು. ಯಾವುದೇ ಕೇಂದ್ರೀಯ ಅಥವಾ ಸರಕಾರದ ಅಧೀನಕ್ಕೆ ಬಾರದ ವಿಕೇಂದ್ರಿತ ನಗದು ವಹಿವಾಟನ್ನು ಪರಿಚಯಿಸುವ ಸಲುವಾಗಿ ಸತೋಶಿ ನಕಮೋಟೋ ಅನ್ನೊ ಅಪರಿಚಿತ ವ್ಯಕ್ತಿ 2009ರಲ್ಲಿ ಈ ನಗದನ್ನು ಸೃಷ್ಟಿಸಿದ, ಹಾಗೆ ಇದರೊಟ್ಟಿಗೆ ಇದನ್ನು ಫಿಯೆಟ್ ಕರೆನ್ಸಿಯಿಂದ ಉಂಟಾಗುತ್ತಿರುವ ಹಣದ್ದುಬ್ಬರದ ಸಮಸ್ಯೆಗೆ ಕಡಿವಾಣ ಹಾಕಲು, ನಗದು ವಹಿವಾಟಿಗೆ ತಗುಲುವ ವೆಚ್ಚ ಕಡಿತಗೊಳ್ಳಿಸಲು ಮತ್ತು ಪ್ರಪಂಚದಲ್ಲೇ ಏಕ ರೀತಿಯ ನಗದು ಬಳಕೆಗೆ ಉತ್ತೇಜನ ನೀಡಲು ಈ ಮಾದರಿಯ ಕರೆನ್ಸಿಯನ್ನು ರಚಿಸಲಾಯಿತು ಎಂದು ಸಹ ಹೇಳಲಾಗುತ್ತದೆ.

ಎಲ್ಲಿ ಸಿಗುತ್ತೆ ಈ ಬಿಟ್ಕಾಯಿನ್?
ಬಿಟ್ಕಾಯಿನ್ ಯಾವುದೋ ಅಂಗಡಿ ಮಳಿಗೆ ಅಥವಾ ಭೂ ಗರ್ಭದಲ್ಲಿ ಸಿಗುವ ನಗದಲ್ಲ. ಇದು ಕಣ್ಣಿಗೆ ಕಾಣದ, ಸ್ಪರ್ಶಕ್ಕೆ ಸಿಗದ, ಭೌತಿಕ ರೂಪವೇ ಇಲ್ಲದ ಡಿಜಿಟಲ್ ಕರೆನ್ಸಿ. ಈ ಮಾದರಿಯ ಕರೆನ್ಸಿ ಖರೀದಿಗೆಂದೆ ಪ್ರತ್ಯೇಕ ಆನ್ಲೈನ್ ವಿನಿಮಯ ವೇದಿಕೆಗಳಿವೆ. ಅವುಗಳ ಮೂಲಕ ಈ ಡಿಜಿಟಲ್ ಕರೆನ್ಸಿಗಳನ್ನು ಖರೀದಿ ಮಾಡಬಹುದು. BuyUCoin , Coinshare, Unocoin ಇತ್ಯಾದಿಗಳಂತಹ ಹಲವಾರು ಆನ್‌ಲೈನ್ ವಿನಿಮಯ ಕೇಂದ್ರಗಳಿಂದ ಬಿಟ್ಕಾಯಿನ್ ಅನ್ನು ಖರೀದಿಸಬಹುದು.


ಬಿಟ್ಕಾಯಿನ್ ಗಳನ್ನು ಖರಿದಿಸೋದು ಹೇಗೆ?
ನಾವು ಖರೀದಿಸೊ ಚಿನ್ನ, ಆಭರಣ, ಭೂಮಿ, ಮನೆಯ ರೀತಿಯಲ್ಲಿ ಈ ಮಾದರಿಯ ಕಾಯಿನ್ಗಳನ್ನು ಖರೀದಿಸಲಾಗದು. ಕ್ರಿಪ್ಟೋಕರೆನ್ಸಿ ಬಳಕೆ ಮತ್ತು ಖರೀದಿಗೆ ಅದರದ್ದೇ ಆದ ಹಂತಗಳಿವೆ. ಅವುಗಳನ್ನು ಈ ಕೆಳಗೆ ವಿವರಿಸಲಾಗಿದೆ. ಬಿಟ್ಕಾಯಿನ್ ಖರೀದಿಗೂ ಮುನ್ನ ನಿಮ್ಮ ಬಳಿ ಕ್ರಿಪ್ಟೋ ಎಕ್ಸ್ಚೇಂಜ್ ಖಾತೆ, ವೈಯಕ್ತಿಕ ದಾಖಲೆಗಳು, ಉತ್ತಮ ಗುಣಮಟ್ಟದ ಸುರಕ್ಷಿತ ಇಂಟರ್ನೆಟ್ ಸೇವೆ ಮತ್ತು ಖರೀದಿಸಲು ಬೇಕಾದ ಪೇಮೆಂಟ್ ವಿಧಾನ ಇರುವುದು ಕಡ್ಡಾಯ.


ಹಂತ-01: ಕ್ರಿಪ್ಟೋಕರೆನ್ಸಿ ವಿನಿಮಯ ಫ್ಲಾಟ್ ಫಾರ್ಮ್ಸ್ ನ ಆಯ್ಕೆ
ಕ್ರಿಪ್ಟೋಕರೆನ್ಸಿ ಖರೀದಿಸಲು ಕ್ರಿಪ್ಟೋಕರೆನ್ಸಿ ಎಕ್ಸ್ಚೇಂಜ್ ಖಾತೆಯ ಆಯ್ಕೆ ಬಹಳ ಪ್ರಮುಖ. ನಾವು ಹಣ ಕೊಟ್ಟು ಪಡೆಯುವ ಈ ಕಾಣದ ಡಿಜಿಟಲ್ ನಗದು ಯಾವ ಖಾತೆಯಲ್ಲಿ ಸುರಕ್ಷಿತವಾಗಿ, ನಮ್ಮ ಬಳಕೆಗೆ ಅನುಕೂಲಕರವಾಗಿ, ಯಾವುದೇ ಹ್ಯಾಕಿಂಗ್ಗೆ ಒಳಪಡದೆ ನಂಬಿಕೆಗೆ ಅರ್ಹವಾಗಿರುವ, ನಮ್ಮ ವಹಿವಾಟು ಅಥವಾ ಖಾತೆಯ ಮಾಹಿತಿ ಸೋರಿಕೆಯಾಗದಂತೆ ಭದ್ರಪಡಿಸುವ ವಿನಿಮಯ ಖಾತಾ ಆಯ್ಕೆ ಬಹಳ ಮುಖ್ಯ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆನೆಂದರೆ ಎಲ್ಲಾ ಕ್ರಿಪ್ಟೋಕರನ್ಸಿ ವಿನಿಮಯ ವೇದಿಕೆಗಳಲ್ಲು ಎಲ್ಲಾ ಬಗೆಯ ಕ್ರಿಪ್ಟೋಕರೆನ್ಸಿ ಲಭ್ಯವಿರವು. ನಮ್ಮ ಜ್ಞಾನ ಅಥವಾ ಪ್ರಚಲಿತ ಬೇಡಿಕೆಗೆ ಅನುಗುಣವಾಗಿ ಆಯ್ದ ಕ್ರಿಪ್ಟೋಕರೆನ್ಸಿಯನ್ನು ಆಯಾ ವಿನಿಮಯ ವೇದಿಕೆಗಳ ಮೂಲಕ ಖರೀದಿಸಬೇಕು.


ಹಂತ-02: ಪಾವತಿಯ ಆಯ್ಕೆ
ಕ್ರಿಪ್ಟೋಕರೆನ್ಸಿ ವಿನಿಮಯ ವೇದಿಕೆಗಳ ಆಯ್ಕೆಯ ನಂತರ, ವಿನಿಮಯ ಖಾತೆಗೆ ವೈಯಕ್ತಿಕ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಬಿಟ್ಕಾಯಿನ್ ಖರಿದಿಸಲು ಯೋಚಿಸುವ ಯಾರೆಯಾದರು ಕಾನೂನು ವ್ಯವಸ್ಥೆಗೆ ಬದ್ದವಾಗಿ, ಭದ್ರತೆ ಮತ್ತು ಸುರಕ್ಷತೆಯಿಂದ ಖರೀದಿಸಲು, ಮೊದಲಿಗೆ ವಿನಿಮಯ ಖಾತೆಗೆ ತಮ್ಮ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಸೇರಿದಂತೆ ಅಗತ್ಯವಿರುವ ಮೂಲ ದಾಖಲೆಗಳನ್ನೆಲ್ಲ ಸಲ್ಲಿಸಬೇಕು. ನಂತರ KYC ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಬೇಕು. ವಿನಿಮಯ ಖಾತೆಗೆ ವಿವರಣೆಗಳನ್ನು ಜೋಡಿಸಿದ ನಂತರ ಮತ್ತು ನೀಡಿದ ದಾಖಲೆಗಳ ಪರಿಶೀಲನೆಯಾದ ನಂತರ ಪಾವತಿ ಮಾದರಿಯನ್ನು ನಮೂದಿಸಬೇಕು . ಅದು ನಿಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಪಾವತಿಸಬಹುದು ಅಥವಾ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಮೂಲಕವೂ ಪಾವತಿಸಿ ಬಿಟ್ಕಾಯಿನ್ ಅಥವಾ ಬೇರೆ ಮಾದರಿಯ ಕ್ರಿಪ್ಟೋಕರೆನ್ಸಿಗಳನ್ನು ಖರೀದಿಸಬಹುದು. ಹಾಗೆ ಸದ್ಯ ಪೇಟೀಯಂ ಜೊತೆ ಜೆಪಿ ಮೋರ್ಗನ್ (USA) ಮತ್ತು ಬಿ ಎನ್ ವೈ ಮೆಲನ್(USA) ಬ್ಯಾಂಕ್ಗಳು ಕೂಡ ಈ ಮಾದರಿಯು ಕರೆನ್ಸಿ ಖರೀದಿಗೆ ಅನುಮೋದನೆ ನೀಡಿದೆ.


ಹಂತ-03: ಬಿಟ್ಕಾಯಿನ್ ಖರೀದಿ
ಬಿಟ್ಕಾಯಿನ್ ಎಕ್ಸ್ಚೇಂಜ್ ನಲ್ಲಿ ಖಾತೆ ತೆರೆದು ಪಾವತಿ ಹಂತವನ್ನು ತಲುಪಿದ ಮೇಲೆ ಮುಂದಿನ ಹಂತ ಕ್ರಿಪ್ಟೋಕರೆನ್ಸಿಯ ಖರೀದಿ. ಇಲ್ಲಿ ನಿಮ್ಮ ಆಯ್ಕೆಯ ಕ್ರಿಪ್ಟೋಕರೆನ್ಸಿ ವಿನಿಮಯ ಆ್ಯಪ್ ನಲ್ಲಿ ಲಭ್ಯವಿರುವ ಕ್ರಿಪ್ಟೋಕರೆನ್ಸಿಗಳಲ್ಲಿ. ನಿಮ್ಮಿಚ್ಛೆಯ ಕರೆನ್ಸಿಯನ್ನು ಆರ್ಡರ್ ಮಾಡಬಹುದು. ಆದರೇ ಇಲ್ಲಿ ನಾವು ನೆನಪಿನಲ್ಲಿಡಬೇಕಾದ ವಿಷಯವೇನೆಂದರೆ ಕ್ರಿಪ್ಟೋಕರೆನ್ಸಿ ದರ ಬೇಡಿಕೆಗೆ ಅನುಗುಣವಾಗಿ ನಿಗದಿಪಡಿಸಲಾಗುತ್ತದೆ.


ಹಂತ-04: ಸುರಕ್ಷಿತ ಸಂಗ್ರಹಣೆ
ಬಿಟ್ಕಾಯಿನ್ ಖರೀದಿಯಲ್ಲಿ ಕೊನೆಯ ಮತ್ತು ಅಂತಿಮ ಘಟ್ಟ ಸುರಕ್ಷಿತ ಸಂಗ್ರಹ. ಈ ಬಿಟ್ಕಾಯಿನ್ /ಕ್ರಿಪ್ಟೋಕರೆನ್ಸಿಗಳನ್ನು/ ಡಿಜಿಟಲ್ ಸ್ವತ್ತುಗಳನ್ನು ಹೆಚ್ಚು ಸುರಕ್ಷಿತವಾಗಿ ಸಂಗ್ರಹಿಸುವ ಸ್ಥಳ ಎಂದರೆ ಅದು ಡಿಜಿಟಲ್ ವ್ಯಾಲೆಟ್ಗಳಲ್ಲಿ ಮಾತ್ರ. ಏಕೆಂದರೆ ನಮ್ಮ ಎಲ್ಲಾ ಡಿಜಿಟಲ್ ನಗದಿನ ಸಂಪೂರ್ಣ ವಿವರ ಈ ಮಾದರಿಯ ವ್ಯಾಲೆಟ್ಗಳು ಲಾಕರ್ ರೀತಿಯ ಸುರಕ್ಷತೆ ನೀಡುತ್ತವೆ. ಮತ್ತು ಪರ್ಸನಲ್ ಪಾಸ್ವರ್ಡ್ ಇಲ್ಲದೆ ಈ ವ್ಯಾಲೆಟ್ ತೆರೆಯುವ ಯಾವುದೇ ಆಯ್ಕೆ ಇರದ ಕಾರಣ ಇಲ್ಲಿ ಹ್ಯಾಕಿಂಗ್ಗೆ ಆಸ್ಪದವಿಲ್ಲ.

ಈ ವ್ಯಾಲೆಟ್ಗಳು ಕ್ರಿಪ್ಟೋಕರೆನ್ಸಿ ಎಕ್ಸ್ಚೇಂಜ್ ಆ್ಯಪ್ ಗಳಲ್ಲಿ ಲಭ್ಯವಿರುತ್ತವೆ. ಈ ಪರಿಯ ವ್ಯಾಲೆಟ್ಗಳಲ್ಲಿ ಕೋಲ್ಡ್ ವ್ಯಾಲೆಟ್ ಮತ್ತು ಹಾಟ್ ವ್ಯಾಲೆಟ್ ಎಂಬ ಎರಡು ರೀತಿಯ ವ್ಯಾಲೆಟ್ಗಳನ್ನು ಕಾಣಬಹುದು ಇವುಗಳನ್ನ ಆಫ್-ಲೈನ್ ಮತ್ತು ಆನ್-ಲೈನ್ ವ್ಯಾಲೆಟ್ಗಳು ಅಂತಲೂ ಕರೆಯುತ್ತಾರೆ. ನಮ್ಮ ಡಿಜಿಟಲ್ ನಗದು/ ಕ್ರಿಪ್ಟೋಕರನ್ಸಿಯ ವ್ಯಾಪರ ಮತ್ತು ವ್ಯವಹಾರವನ್ನು ಸುರಕ್ಷಿತವಾಗಿರಿಸಿಕೊಳ್ಳಲು ಒಂದು ಕರೆನ್ಸಿ ಎಕ್ಸ್ಚೇಂಜ್ ಖಾತೆ, ಸುರಕ್ಷಿತ ಪಾವತಿ ವಿಧಾನ ಮತ್ತು ಅಲ್ಪಾವಧಿಯ ವಹಿವಾಟಿಗಾಗಿ ಹಾಟ್ ವ್ಯಾಲೆಟ್, ದೀರ್ಘಾವಧಿಯ ಕರೆನ್ಸಿ ವಹಿವಾಟಿಗಾಗಿ ಕೋಲ್ಡ್ ವ್ಯಾಲೆಟ್ ಅನ್ನು ಬಳಸುವುದು ಉತ್ತಮ.


ಕ್ರಿಪ್ಟೋಕರೆನ್ಸಿ ಬಳಸೋದು ಹೇಗೆ ಮತ್ತು ಎಲ್ಲಿ?
ಕ್ರಿಪ್ಟೋಕರೆನ್ಸಿಗಳನ್ನು ನಾವು ನಮ್ಮ ದಿನನಿತ್ಯದ ಬಳಕೆಯಲ್ಲಿ ಸಾಮಾನ್ಯ ರೀತಿಯಲ್ಲಿ ಬಳಸಲಾಗದು. ನಾವು ಖರೀದಿಸಿದ ಕರೆನ್ಸಿಗಳನ್ನು ನಮಗೆ ಅವಶ್ಯವೆನಿಸಿದಾಗ ಮಾರಾಟ ಮಾಡಬೇಕು. ಆ ಕರೆನ್ಸಿಯನ್ನು ಖರೀದಿಸಲಿಚ್ಚಿಸುವ ವ್ಯಕ್ತಿ ನಾವು ಮಾರಾಟಕ್ಕಿಟ್ಟ ಕರೆನ್ಸಿಗೆ ಆ ಗಳಿಗೆಯಲ್ಲಿ ಕ್ರಿಪ್ಟೋಕರೆನ್ಸಿಯ ಮೌಲ್ಯ ಎಷ್ಟಿರುತ್ತದೆಯೋ ಅಷ್ಟು ಹಣ ಪಾವತಿಸಿ ಖರೀದಿಸುತ್ತಾನೆ. ಈ ಖರೀದಿ ಪ್ರಕ್ರಿಯೆ ಪ್ರಪಂಚದ ಯಾವ ಸ್ಥಳದಿಂದ ಬೇಕಾದರೂ ನಡೆಯಬಹುದು. ನಂತರ ಆ ವ್ಯಕ್ತಿ ಖರೀದಿಗೆ ನೀಡಿದ ಹಣ ನಮ್ಮ ವ್ಯಾಲೆಟ್ನಲ್ಲಿ ಜಮವಾಗುತ್ತದೆ. ಅದುನ್ನು ನಮ್ಮ ಬ್ಯಾಂಕ್ ಖಾತೆಗೆ INR ರೂಪದಲ್ಲಿ ವರ್ಗಾಹಿಸಿಕೊಳ್ಳಬಹುದು.

ಬಿಟ್‌ ಕಾಯಿನ್ ಎಂದರೇನು? ಅನುಕೂಲ, ಅನಾನುಕೂಲ, ಇತರೆ ಮಾಹಿತಿ ಇಲ್ಲಿದೆ..

You may also like