ವರದಿ: ಸುನೀಲ್ ಬಿ ಎನ್
ಪರಿಸರ ದಿನಾಚರಣೆ ದಿನ ಹಲವಾರು ಕಡೆ, ಅದರಲ್ಲೂ ನಗರ ಪ್ರದೇಶಗಳಲ್ಲಿ ಗಿಡ ನೆಟ್ಟು ಒಂದೇ ಗಿಡದ ಸುತ್ತ ಎಲ್ಲರೂ ನಿಂತುಕೊಂಡು ಪೋಟೋ ತೆಗೆದುಕೊಳ್ಳುತ್ತಾರೆ. ಯಾಕಂದ್ರೆ ಎಲ್ಲರೂ ಈ ಮಹತ್ತರ ಕಾರ್ಯದಲ್ಲಿ ಪಾಲ್ಗೊಂಡಿದ್ದೇವೆ ಎಂದು. ಈ ಮಾಹಿತಿ ದಿನಪತ್ರಿಕೆಗಳಲ್ಲಿಯೂ ಪ್ರಕಟವಾಗುವುದನ್ನು ನೋಡಿದ್ದೇವೆ. ಆದರೆ ಆ ದಿನ ಕಳೆದ ನಂತರ ಅವರೆಲ್ಲರೂ ಸೇರಿ ನೆಟ್ಟ ಎಷ್ಟು ಗಿಡಗಳನ್ನು ಪ್ರಮಾಣಿಕವಾಗಿ ಪೋಷಿಸುತ್ತಿದ್ದಾರೆ?, ಯಾರು ಪೋಷಣೆ ಮಾಡುತ್ತಿದ್ದಾರೆ?, ಎಷ್ಟು ವರ್ಷಗಳಲ್ಲಿ ಅವರು ನೆಟ್ಟ ಎಷ್ಟು ಗಿಡಗಳನ್ನು ಬೆಳೆಸಿ ಉಳಿಸಿದ್ದಾರೆ ಎಂದು ಯಾವ ಮಾದ್ಯಮಗಳಲ್ಲೂ ಪ್ರಕಟವಾಗುವುದನ್ನು ನಾವು ನೋಡೇ ಇಲ್ಲ. ಪರಿಸರ ಕಾಳಜಿ ಮೇಲಿನ ಪ್ರೀತಿಯಿಂದ ಹೀಗೆ ಬೇಸರ ವ್ಯಕ್ತಪಡಿಸಿದ್ದು ಬಿಂಡಹಳ್ಳಿ ಗ್ರಾಮದ ಯುವಕರು.
ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕು, ಬಿಂಡಹಳ್ಳಿ ಗ್ರಾಮದ ಯುವಕರು ಪರಿಸರ ದಿನಾಚರಣೆ ದಿನದಂದು ತಮ್ಮ ಗ್ರಾಮದ ಕೆರೆ, ದೇವಸ್ಥಾನದ ಸುತ್ತ ಗಿಡ ನೆಡುವ ಸಂದರ್ಭದಲ್ಲಿ ಕನ್ನಡ ಅಡ್ವೈಜರ್ ಜೊತೆಗೆ ಪ್ರತಿಕ್ರಿಯಿಸಿದ್ದು ಹೀಗೆ. ನಮ್ಮೂರಲ್ಲಿ ಅರಣ್ಯ ಪ್ರದೇಶ ಇದೆ. ಅದರ ಪಕ್ಕದಲ್ಲೇ ಕೆರೆ ಇದ್ದು ಸದಾಕಾಲ ನೀರು ಇರುತ್ತದೆ. ತೀರ ಬರದ ಸಮಯದಲ್ಲಿ ಮಾತ್ರ ನೀರು ಇರುವುದಿಲ್ಲ. ಈ ಹಿಂದೆ ಫಾರೆಸ್ಟ್ ಇಲಾಖೆಯಿಂದಲೇ ಈ ಸ್ಥಳಗಳಲ್ಲೇ ಗುಂಡಿ ಹೊಡೆಸಿ ಸಸಿಗಳನ್ನು ನೆಡೆಸಲಾಗಿತ್ತು. ಆದರೆ ಪಕ್ಕದಲ್ಲೇ ನೀರು ಇದ್ದರೂ ಸರಿಯಾದ ನಿರ್ವಹಣೆ ಮಾಡದೇ ಒಂದು ಸಸಿಯೂ ಬದುಕುಳಿಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರೂ.
ಈಗ ನಮಗೂ ಅರಿವಾಗಿದೆ. ನಮ್ಮ ಕೆರೆ ನೀರನ್ನು ಸರಿಯಾಗಿ ಸದ್ಭಳಕೆ ಮಾಡಿಕೊಂಡು ನಮ್ಮ ಊರಿನ ಪರಿಸರ ವ್ಯವಸ್ಥೆಯನ್ನೂ ಇನ್ನಷ್ಟು ಸುಂದರವಾಗಿಸಬಹುದು. ಈ ಮಹತ್ತರ ಕಾರ್ಯಕ್ಕಾಗಿ ನಮ್ಮ ಊರಿನ ಯುವಕರೆಲ್ಲರೂ ಪಣತೊಟ್ಟಿದ್ದೇವೆ. ಈ ಗಿಡಗಳ ನಿರ್ವಹಣೆಗಾಗಿ ಖರ್ಚುವೆಚ್ಚವನ್ನು ನಾವೇ ಬರಿಸಲು ತೀರ್ಮಾನಿಸಿ ಎಲ್ಲರೂ ಸಾಧ್ಯವಾದಷ್ಟು ಹಣವನ್ನು ಹಾಕಿಕೊಂಡಿದ್ದೇವೆ. ಊರಿನಲ್ಲಿರುವ ಯುವಕರು ಆಗಾಗ ಗಿಡ ನಿರ್ವಹಣೆ ನೋಡಿಕೊಳ್ಳುವ ಜೊತೆಗೆ, ಪ್ರತ್ಯೇಕವಾಗಿ ಒಬ್ಬರನ್ನು ತಿಂಗಳ ಸಂಬಳ ನೀಡುವುದಾಗಿ ಹೇಳಿ ನೇಮಿಸಿದ್ದೇವೆ ಎಂದು ಗಿಡ ಪೋಷಣೆಗಾಗಿ ಹಾಕಿಕೊಂಡ ಪ್ಲಾನ್ ಬಗ್ಗೆ ಹೇಳಿದರು.
‘ನಮ್ಮ ಊರು ನಮ್ಮ ಹೆಮ್ಮೆ, ನಮ್ಮ ಪರಿಸರ ನಮ್ಮ ಗರ್ವ’ ಆಗಿರಬೇಕು. ಇಂತಹ ಮನಸ್ಥಿತಿ ಪ್ರತಿಯೊಂದು ಊರಿನ ಯುವಕರಿಗೆಲ್ಲಾ ಬರಬೇಕು. ಯುವಕರೆಲ್ಲರೂ ರಾಜಕೀಯ, ಚುನಾವಣೆ, ಊರಿನ ದೊಡ್ಡ ಹಬ್ಬಗಳಲ್ಲಿ, ಇತ್ತೀಚೆಗೆ ಟ್ರೆಂಡ್ ಆಗಿ ಮಾರ್ಪಾಡುತ್ತಿರುವ ಹುಟ್ಟಹಬ್ಬ ಆಚರಣೆ ಮಾಡಲು ತಮ್ಮ ತಮ್ಮ ಊರುಗಳ ಬಸ್ಸ್ಟ್ಯಾಂಡ್ಗಳಲ್ಲಿ ಸೇರುವುದು ಮಾತ್ರ ರೂಢಿಯಲ್ಲಿದೆ. ಅದು ಅವರವರ ಆಸಕ್ತಿ ಆದರೂ ಸಹ, ಪರಿಸರ ಕಾಳಜಿಗೆ ಒಗ್ಗಟ್ಟಾಗಿ ಕೆಲಸ ಮಾಡುವ ಪ್ರವೃತ್ತಿ ಬೆಳೆಯಬೇಕು ಎಂದು ಗಿಡ ನೆಡಲು ಸೇರಿದ್ದ ಯುವಕರಲ್ಲೇ ಒಬ್ಬರೂ ಹೀಗೆ ಪ್ರತಿಕ್ರಿಯಿಸಿದರು.
ಹಳ್ಳಿ ಜನತೆಗೆ ಅರಿವಿಲ್ಲದಂತೆ ಅವರ ಸುತ್ತಮುತ್ತಲ ಪರಿಸರ ಹಾಳಾಗುತ್ತಿದೆ. ಇದು ಅವರ ಗಮನಕ್ಕೆ ಬರುತ್ತಿಲ್ಲ. ಅವರು ತಮ್ಮ ಊರು, ತಮ್ಮ ಪ್ರದೇಶ ಸುಂದರವಾಗಿರಬೇಕು, ಸ್ವಚ್ಛವಾಗಿರಬೇಕು ಎಂದು ಅಲೋಚಿಸಿ ಅದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಹೀಗೆ ಎಚ್ಚೆತ್ತುಕೊಳ್ಳುವ ಸಂದರ್ಭ ಬಂದೇಬರುತ್ತದೆ ಎಂದ ಯುವಕರು, ನಾವು ಹೇಳಿದ ಆಶಯಗಳೆಲ್ಲವೂ ನಮ್ಮೆಲ್ಲರದ್ದು ಆದ್ದರಿಂದ ಯಾರ ಹೆಸರನ್ನು ಸೂಚಿಸಬೇಡಿ ಎಂದರು.